ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರೀಕ್ಷೆಯ ಒತ್ತಡದಿಂದಲೋ, ಪ್ರೇಮ ವೈಫಲ್ಯದಿಂದಲೋ, ರ್ಯಾಗಿಂಗ್‌ನಿಂದ ಮನನೊಂದು ವಿದ್ಯಾರ್ಥಿಗಳು ಹಾಸ್ಟೆಲ್‌ನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗಷ್ಟೇ ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯಲ್ಲಿ ಓದುತ್ತಿದ್ದ ಸಾಹಿಲ್ ವಾಕೋಡೆ ಎನ್ನುವ ವಿದ್ಯಾರ್ಥಿ ಹಾಸ್ಟೆಲ್‌ನ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಈ ಘಟನೆಯಿಂದ ಎಚ್ಚೆತ್ತ ಆಡಳಿತ ಮಂಡಳಿ ಹಾಸ್ಟೆಲ್‌ನ ಪ್ರತೀ ರೂಮ್‌ನಲ್ಲಿರುವ ಸೀಲಿಂಗ್ ಫ್ಯಾನ್‌ಗಳನ್ನು ತೆಗೆದು ಟೇಬಲ್ ಫ್ಯಾನ್‌ಗಳನ್ನು ಹಾಕುತ್ತಿದೆ.
ಸಾಹಿಲ್ ರವೀಂದ್ರ ವಾಕೋಡೆ ಎನರ್ಜಿ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿದ್ದ. ಪರೀಕ್ಷೆಯಲ್ಲಿ ಚಾಟ್ ಜಿಪಿಟಿ ಬಳಕೆ ಮಾಡಿ ನಕಲು ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಶಾಕ್‌ನಲ್ಲಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮಕ್ಕಳಿಗೆ ರೂಮಿನಲ್ಲಿ ಸೀಲಿಂಗ್ ಫ್ಯಾನ್ ಇರೋದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಇದೀಗ ಮೊದಲ ಬ್ಯಾಚ್‌ನಷ್ಟು ಫ್ಯಾನ್‌ಗಳು ಕ್ಯಾಂಪಸ್‌ಗೆ ಬಂದಿದ್ದು, ಫಿಟ್ಟಿಂಗ್ ಕೆಲಸ ಆರಂಭವಾಗಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಕಾಲೇಜು ಆಡಳಿತ ಮಂಡಳಿ ಮಾತನಾಡಿದ್ದು, ಸಾಹಿಲ್ ಆತ್ಮಹತ್ಯೆ ಪ್ರಕರಣದ ನಂತರ ನಾವು ಹೊಸ ಫ್ಯಾನ್‌ಗಳನ್ನು ತರಿಸಿಲ್ಲ. ಇದಕ್ಕೂ ಮುನ್ನವೇ ಯಾವ ವಿದ್ಯಾರ್ಥಿಗಳು ದುಡುಕಬಾರದು ಎನ್ನುವ ಕಾರಣಕ್ಕೆ ಫ್ಯಾನ್‌ಗಳನ್ನು ಆರ್ಡರ್ ಮಾಡಿದ್ದೆವು. ಅವೆಲ್ಲ ಈಗ ಡೆಲಿವರ್ ಆಗಿವೆ ಎಂದು ಹೇಳಿದೆ.
ಇತ್ತ ವಾಕೊಡೆ ಸಾವಿಗೆ ನ್ಯಾಯ ಸಿಗಬೇಕು ಎಂದು ಪೋಷಕರು ಹಾಗೂ ಸಹಪಾಠಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನನ್ನ ಮಗ ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿ ಬಿದ್ದಿರುವ ಬಗ್ಗೆ ನನಗೆ ಗೊತ್ತಿಲ್ಲ. ಅದು ನಿಜವೋ ಅಥವಾ ಕಟ್ಟುಕತೆಯೋ ಗೊತ್ತಿಲ್ಲ. ನಮ್ಮ ಮಗ ನಿತ್ಯವೂ ಕರೆ ಮಾಡಿದಾಗ ಇಲ್ಲಿನ ದೌರ್ಜನ್ಯ ಹಾಗೂ ಜಾತಿಯ ವಿಷಯವಾಗಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾನೆ. ಸದ್ಯ ಕಾಲೇಜಿನ ಡೀನ್‌ನ್ನು ಕೆಲಸದಿಂದ ವಜಾ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



