September 22, 2026
Tuesday, September 22, 2026
spot_img

‘ಈ ಗೌರವ ನನ್ನೊಬ್ಬನದ್ದಲ್ಲ’: ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅನಂತ್ ನಾಗ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಅನಂತ್ ನಾಗ್ ಅವರಿಗೆ ಸಭಾಂಗಣದಲ್ಲಿದ್ದ ಗಣ್ಯರು ಹಾಗೂ ಚಿತ್ರರಂಗದ ಪ್ರತಿನಿಧಿಗಳು ಎದ್ದು ನಿಂತು ಗೌರವ ಸಲ್ಲಿಸಿದರು. ಹಲವು ದಶಕಗಳ ಕಾಲ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ನಟನಿಗೆ ದೊರೆತ ಈ ಗೌರವದ ಕ್ಷಣ ವಿಶೇಷ ಗಮನ ಸೆಳೆಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಹಿರಿಯ ನಟ ಅನಂತ್ ನಾಗ್ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ಸಲ್ಲಿಸಿದ ಅವರು, ಈ ಗೌರವ ತಮ್ಮ ಪಾಲಿಗೆ ಅತ್ಯಂತ ವಿಶೇಷವಾಗಿದೆ ಎಂದು ಹೇಳಿದರು.

ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ನನಗೆ ಅತ್ಯಂತ ಗೌರವದ ಸಂಗತಿ. ಈ ಪ್ರಶಸ್ತಿಯ ಮಹತ್ವ ಮತ್ತು ಅದರ ಭವ್ಯತೆಯನ್ನು ಇನ್ನೂ ಸಂಪೂರ್ಣವಾಗಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇಂತಹ ಸಮಾರಂಭಗಳಲ್ಲಿ ನಾನು ಹೆಚ್ಚು ಭಾಗವಹಿಸಿಲ್ಲ. ಆದರೆ ಇಂದು ನಿಮ್ಮೆಲ್ಲರೊಂದಿಗೆ ಇಲ್ಲಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:

ಚಲನಚಿತ್ರಗಳಲ್ಲಿ ಈ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ, ಈ ಪ್ರಶಸ್ತಿ ನನಗೊಬ್ಬರಿಗೆ ಸೇರಿದ್ದಲ್ಲ; ಈ ಪ್ರಶಸ್ತಿ ನಿರ್ಮಾಪಕ, ಬರಹಗಾರ, ನಿರ್ದೇಶಕ, ಮೇಕಪ್ ಕಲಾವಿದ ಮತ್ತು ನನ್ನೊಂದಿಗೆ ಅವಿಶ್ರಾಂತವಾಗಿ ಕೆಲಸ ಮಾಡಿದ ಎಲ್ಲಾ ಹುಡುಗಿಯರು ಮತ್ತು ಹುಡುಗರಿಗೂ ಸೇರಿದೆ ಎಂದು ಹೇಳಿದರು.

ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಅವರು, “ನಾನು ಆಶ್ರಮದಲ್ಲಿ ಬೆಳೆದವನು. ಅಲ್ಲಿಂದ ಮುಂಬೈಗೆ ತೆರಳಿ ನನ್ನ ಅಭಿನಯದ ಪಯಣವನ್ನು ಆರಂಭಿಸಿದ್ದೆ” ಎಂದು ತಮ್ಮ ಕಲಾ ಬದುಕಿನ ಆರಂಭದ ದಿನಗಳನ್ನು ನೆನಪಿಸಿಕೊಂಡರು.

ರಂಗಭೂಮಿಯಿಂದ ಅಭಿನಯದ ಪಯಣ ಆರಂಭಿಸಿದ ಅನಂತ್ ನಾಗ್, ನಂತರ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟರಾಗಿ ಗುರುತಿಸಿಕೊಂಡರು. ‘ಸಂಕಲ್ಪ’ ಸೇರಿದಂತೆ ಆರಂಭಿಕ ಚಿತ್ರಗಳಿಂದಲೇ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿದ ಅವರು, ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕ, ಪೋಷಕ ನಟ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, ಪ್ರೇಕ್ಷಕರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !