October 13, 2026
Tuesday, October 13, 2026
spot_img

ಹೊಸ ಯೋಜನೆಗಳಿಗೆ ಹಣಕಾಸು ಇಲಾಖೆಯ ಬ್ರೇಕ್: 27 ಸಾವಿರ ಕೋಟಿ ರೂ. ಕೊರತೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ನಡುವೆಯೇ ಸರಣಿ ಹೊಸ ಯೋಜನೆಗಳನ್ನು ಘೋಷಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಘೋಷಿಸಿರುವ ಯೋಜನೆಗಳ ಅನುಷ್ಠಾನಕ್ಕೇ ಸುಮಾರು 27,000 ಕೋಟಿ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಸೆ.17ರಂದು ಆರ್ಥಿಕ ಇಲಾಖೆ ಸಲ್ಲಿಸಿರುವ ಆಂತರಿಕ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ರಾಜ್ಯದ ಸಾಲದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆಗಳನ್ನು ಘೋಷಿಸುವುದು ಅಥವಾ ಹೆಚ್ಚುವರಿ ಆರ್ಥಿಕ ಬದ್ಧತೆಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಲಿದೆ ಎಂದು ಆರ್ಥಿಕ ಇಲಾಖೆ ಮುಖ್ಯಮಂತ್ರಿ ಅವರಿಗೆ ತಿಳಿಸಿದೆ. ಈ ಟಿಪ್ಪಣಿಯನ್ನು ಬಿಜೆಪಿ ಶಾಸಕ ಭರತ್ ಶೆಟ್ಟಿ ಬಹಿರಂಗಪಡಿಸಿದ್ದು, ವಿಧಾನಸಭೆಯಲ್ಲಿ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಯಿತು.

ಹಣಕಾಸಿನ ಎಚ್ಚರಿಕೆ ನೀಡಿದ್ದರೂ ಪ್ಯಾಕೇಜ್ ಪ್ರಕಟ

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಆರ್ಥಿಕ ಇಲಾಖೆಯೇ ಸರ್ಕಾರದ ಯೋಜನೆಗಳಿಗೆ ಹಣಕಾಸಿನ ತೊಂದರೆ ಕುರಿತು ಎಚ್ಚರಿಕೆ ನೀಡಿದ್ದರೂ ಕರಾವಳಿ ಅಭಿವೃದ್ಧಿಗೆ 32,000 ಕೋಟಿ ರೂ. ಪ್ಯಾಕೇಜ್ ಹೇಗೆ ಪ್ರಕಟಿಸಿದಿರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದಕ್ಕೆ ಸಚಿವ ಕೆ.ಜೆ. ಜಾರ್ಜ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ:

ಆರ್ಥಿಕ ಇಲಾಖೆ ಏನು ಹೇಳಿದೆ?

ಆರ್ಥಿಕ ಇಲಾಖೆಯ ಪ್ರಕಾರ, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಗುತ್ತಿಗೆದಾರರಿಗೆ ಸುಮಾರು 36,136 ಕೋಟಿ ಬಿಲ್ ಪಾವತಿ ಬಾಕಿಯಿದೆ. ಇದರ ಜೊತೆಗೆ ಬರ ಪರಿಸ್ಥಿತಿಯಿಂದ ಕುಡಿಯುವ ನೀರು ಮತ್ತು ಪರಿಹಾರ ಕಾರ್ಯಗಳಿಗೆ ಹೆಚ್ಚುವರಿ ಅನುದಾನದ ಅಗತ್ಯವೂ ಎದುರಾಗಿದೆ.

ಇದೇ ವೇಳೆ ನೀರಾವರಿ ಪಂಪ್‌ಸೆಟ್‌ಗಳಿಗೆ ನೀಡುವ ವಿದ್ಯುತ್ ಸಬ್ಸಿಡಿ ವೆಚ್ಚ 4,000 ಕೋಟಿಯಿಂದ 5,000 ಕೋಟಿವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಸಂಪನ್ಮೂಲ ಕೊರತೆಯಿಂದ ಇಂಧನ, ಸಾರಿಗೆ ಹಾಗೂ ನೀರಾವರಿ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಬಜೆಟ್ ಹಂಚಿಕೆಯಲ್ಲಿ ಒತ್ತಡ ಉಂಟಾಗುವ ಸಾಧ್ಯತೆಯಿದೆ.

ಆರ್ಥಿಕ ಇಲಾಖೆಯ ಎಚ್ಚರಿಕೆ ಬೆನ್ನಲ್ಲೇ ಹೊಸ ಯೋಜನೆಗಳ ಘೋಷಣೆ, ಈಗಾಗಲೇ ಪ್ರಕಟಿಸಿರುವ ಯೋಜನೆಗಳ ಅನುಷ್ಠಾನ ಹಾಗೂ ರಾಜ್ಯದ ಸಾಲದ ಹೊರೆ ಕುರಿತು ಸರ್ಕಾರದ ಮುಂದಿರುವ ಹಣಕಾಸಿನ ಸವಾಲುಗಳು ಮತ್ತೆ ಚರ್ಚೆಗೆ ಬಂದಿವೆ.

Must Read