September 23, 2026
Wednesday, September 23, 2026
spot_img

ಬೀದರ್ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಆಗ್ರಹ: ಸಿಎಂಗೆ ಜಿಲ್ಲೆಯ ಬಿಜೆಪಿ ಶಾಸಕರ ಮನವಿ

ಹೊಸದಿಗಂತ ವರದಿ ಬೀದರ್:

ಬೀದರ್ ಜಿಲ್ಲೆಯ ರೈತರ ಆಧಾರವಾಗಿರುವ ಹಳ್ಳಿಖೇಡ (ಬಿ) ಹತ್ತಿರದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಪುನಶ್ಚೇತನಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಹುಮನಾಬಾದ್‌ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ನೇತ್ರತ್ವದಲ್ಲಿ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರನ್ನು ಭೇಟಿಯಾದ ಬಿಜೆಪಿ ಶಾಸಕರ ನಿಯೋಗ ಕಾರ್ಖಾನೆಯನ್ನು ಶೀಘ್ರವಾಗಿ ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು, ಈಗ ನಡೆಯುತ್ತಿರುವ ಹರಾಜು ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಅಲ್ಲದೆ LROT ಆಧಾರದ ಮೇಲೆ ಖಾಸಗಿ ಸಂಸ್ಥೆಗೆ ಗುತ್ತಿಗೆ ಕೊಟ್ಟು ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾಗಬೇಕು. ಕಾರ್ಖಾನೆಗೆ ಇರುವ ವಿವಿಧ ಬ್ಯಾಂಕ್‌ಗಳ ಸಾಲದ ಬಡ್ಡಿ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ಪುನಶ್ಚೇತನಕ್ಕೆ ಅನುಕೂಲ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ:

ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರು, ಶೀಘ್ರದಲ್ಲೇ ವಿಶೇಷ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದ್ದಾರೆ ಎಂದು ಶಾಸಕ ಪ್ರಭು ಚೌಹಾಣ್ ಹೊಸ ದಿಗಂತಕ್ಕೆ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಔರಾದ್ ಶಾಸಕ ಪ್ರಭು ಚವ್ಹಾಣ, ಬಸವಕಲ್ಯಾಣ ಶಾಸಕ ಶರಣು ಸಲಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !