ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ, ಇನ್ನು ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಬೀಳುತ್ತಿಲ್ಲ ಆದರೆ ದಿನವಿಡೀ ತಣ್ಣಗಿನ ಗಾಳಿ ಬೀಸುತ್ತಿದೆ, ಜತೆಗೆ ಚಳಿ ವಾತಾವರಣ ಹೆಚ್ಚಾಗಿದೆ. ಆಫೀಸಿಗೆ ಹೋಗುವವರು, ಶಾಲೆಗೆ ಹೋಗುವ ಮಕ್ಕಳು ಸ್ವೆಟರ್, ಟೋಪಿ ಜೊತೆಗೆ ಚತ್ರಿಯನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ.
ಇಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿಯಲ್ಲಿಯೂ ಇಂದು ಮಳೆ ಮುಂದುವರಿಯಲಿದೆ. ಹಾವೇರಿ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಇನ್ನೂ ಮೂರು ದಿನ ಒಟ್ಟಾರೆ ಮಳೆ ಬೀಳುವ ನಿರೀಕ್ಷೆ ಇದ್ದು, ರೈತರು ಕೊಂಚ ನಿರಾಳವಾಗಿದ್ದಾರೆ.



