September 25, 2026
Friday, September 25, 2026
spot_img

SIR ನೋಟಿಸ್ ವಿತರಣೆಯಲ್ಲಿ ಕರ್ನಾಟಕ ಶೇ.95ರಷ್ಟು ಪ್ರಗತಿ: 2.18 ಲಕ್ಷ ನೋಟಿಸ್ ಬಾಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ SIR ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದ್ದು, ಇದುವರೆಗೆ 41.63 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್‌ಗಳನ್ನು ತಲುಪಿಸಲಾಗಿದೆ. ಇನ್ನೂ 2.18 ಲಕ್ಷ ನೋಟಿಸ್‌ಗಳು ವಿತರಣೆಗಾಗಿ ಬಾಕಿ ಉಳಿದಿವೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಶುಕ್ರವಾರ ತಿಳಿಸಿದೆ.

ಶೇ.95ರಷ್ಟು ನೋಟಿಸ್ ವಿತರಣೆ ಪೂರ್ಣ

ಮತದಾರರ ಪಟ್ಟಿಯಲ್ಲಿನ ‘ನೋ ಮ್ಯಾಪಿಂಗ್’ ಮತ್ತು ‘ಅಸಂಗತತೆ’ ವಿಭಾಗಕ್ಕೆ ಸೇರಿದ ಮತದಾರರನ್ನು ಉದ್ದೇಶಿಸಿ ಈ ನೋಟಿಸ್‌ಗಳನ್ನು ನೀಡಲಾಗಿದೆ. ರಾಜ್ಯಾದ್ಯಂತ ಒಟ್ಟು 43,82,296 ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ 41,63,368 ನೋಟಿಸ್‌ಗಳು ವಿತರಿಸಲ್ಪಟ್ಟಿವೆ. ಒಟ್ಟಾರೆ ಶೇ.95ರಷ್ಟು ನೋಟಿಸ್ ವಿತರಣೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇ.69.20ರಷ್ಟು ವಿಚಾರಣಾ ಪ್ರಕ್ರಿಯೆ ಪೂರ್ಣ

ವಿತರಿಸಲಾದ ನೋಟಿಸ್‌ಗಳಿಗೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆಯೂ ನಡೆಯುತ್ತಿದೆ. ಇದುವರೆಗೆ 28,80,882 ವಿಚಾರಣೆಗಳು ಪೂರ್ಣಗೊಂಡಿದ್ದು, ಶೇ.69.20ರಷ್ಟು ಪ್ರಕ್ರಿಯೆ ಮುಗಿದಿದೆ. ಇನ್ನೂ 12,82,486 ವಿಚಾರಣೆಗಳು ಬಾಕಿ ಉಳಿದಿವೆ. ನೋಟಿಸ್‌ಗಳಿಗೆ ಸಂಬಂಧಿಸಿದ ವಿಚಾರಣೆಗಳನ್ನು ಪೂರ್ಣಗೊಳಿಸುವ ಕಾರ್ಯವನ್ನು ಚುನಾವಣಾ ಸಿಬ್ಬಂದಿ ಮುಂದುವರಿಸಿದ್ದಾರೆ.

ಇದನ್ನೂ ಓದಿ:

ಸೆ.25ರ ವೇಳೆಗೆ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಒಟ್ಟು 4,48,44,080 ಮತದಾರರು ಇದ್ದಾರೆ. ಇವರಲ್ಲಿ 2.22 ಕೋಟಿ ಪುರುಷರು, 2.25 ಕೋಟಿ ಮಹಿಳೆಯರು ಹಾಗೂ 2,873 ತೃತೀಯಲಿಂಗಿ ಮತದಾರರು ಸೇರಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಯಾವ ಫಾರಂ ಗೆ ಎಷ್ಟು ಅರ್ಜಿಗಳು ಬಂದಿವೆ

ಇದೇ ವೇಳೆ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಿಧ ಅರ್ಜಿಗಳ ಸ್ವೀಕಾರವೂ ಮುಂದುವರಿದಿದೆ. ಹೊಸದಾಗಿ ಹೆಸರು ಸೇರ್ಪಡೆಗೆ ಬಳಸುವ Form 6 ಅಡಿಯಲ್ಲಿ 7,70,988 ಅರ್ಜಿಗಳು ಬಂದಿವೆ. Form 6A ಅಡಿಯಲ್ಲಿ 4,551, ಹೆಸರು ಅಳಿಸುವಿಕೆಗೆ ಸಂಬಂಧಿಸಿದ Form 7 ಅಡಿಯಲ್ಲಿ 61,130 ಹಾಗೂ ವಿವರಗಳ ತಿದ್ದುಪಡಿಗಾಗಿ Form 8 ಅಡಿಯಲ್ಲಿ 11,11,495 ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟಾರೆ 19,48,164 ಅರ್ಜಿಗಳು ಸ್ವೀಕರಿಸಲಾಗಿದೆ.

ಅಕ್ಟೋಬರ್ 12ರಂದು ಕೊನೆಯ ವಿಚಾರಣೆ ನಡೆಯಲಿದ್ದು, ಅಕ್ಟೋಬರ್ 22ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ನೋಟಿಸ್ ಹಂತ ಪೂರ್ಣಗೊಳಿಸಲು ಗಡುವು ನಿಗದಿಯಾಗಿದೆ.

ಒಟ್ಟಿನಲ್ಲಿ, ಎಸ್‌ಐಆರ್‌ ಪ್ರಕ್ರಿಯೆಯ ಅಂತಿಮ ಹಂತಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ನೋಟಿಸ್ ವಿತರಣೆ, ವಿಚಾರಣೆ ಹಾಗೂ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ವೇಗ ನೀಡಬೇಕಿದೆ. ಮತದಾರರು ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿಕೊಂಡು ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಸಂಬಂಧಿತ ಅರ್ಜಿಗಳನ್ನು ಸಲ್ಲಿಸುವ ಅವಕಾಶವಿದೆ.

Must Read