September 25, 2026
Friday, September 25, 2026
spot_img

ದೇವರೇ ಭಾರತವನ್ನು ಕಾಪಾಡಬೇಕು! ರೈಲಿನಲ್ಲಿ ಆದ ಕೆಟ್ಟ ಅನುಭವವನ್ನು ಹಂಚಿಕೊಂಡ ತೇಜಸ್ವಿ ಪತ್ನಿ ಶಿವಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್‌ ಅವರು ರೈಲಿನಲ್ಲಿ ತಮಗಾದ ಕೆಟ್ಟ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಸಿವಿಕ್‌ ಸೆನ್ಸ್‌ ಯಾವಾಗ ಬರುತ್ತದೆ? ಎಂಜಾಯ್‌ ಮಾಡಬೇಕು ಸರಿ, ಆದರೆ ಇನ್ನೊಬ್ಬರಿಗೆ ಕಿರಿಕಿರಿ ಆದರೂ ಪರವಾಗಿಲ್ಲ ಎಂಜಾಯ್‌ ಮಾಡಬೇಕು ಎನ್ನುವ ಮನೋಭಾವ ಬದಲಾಗೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಅತೀ ಕೆಟ್ಟ ಅನುಭವವಾಯ್ತು. ನಮ್ಮ ಜನ ಪಬ್ಲಿಕ್‌ ಪ್ಲೇಸ್‌ಗಳಲ್ಲಿ ಪ್ರೈವೇಟ್‌ ಪ್ಲೇಸ್‌ಗಳಂತೆಯೇ ಬಿಹೇವ್‌ ಮಾಡುತ್ತಾರೆ. ಪಬ್ಲಿಕ್‌ನಲ್ಲಿರುವಾಗ ಇತರರ ಪ್ರೈವೇಟ್‌ ಸ್ಪೇಸ್‌ನ್ನು ಹಾಳು ಮಾಡಬಾರದು ಎನ್ನುವ ಕಾಮನ್‌ ಸೆನ್ಸ್‌ ಇಲ್ಲವಾ? ಸಾರ್ವಜನಿಕ ಸ್ಥಳಗಳಲ್ಲಿ ಮೆಲುದನಿಯಲ್ಲಿ ಮಾತನಾಡುವುದು, ಇತರರಿಗೆ ಕೇಳಿಸುವಂತೆ ಕೂಗಾಡಬಾರದು ಎನ್ನುವುದು ಮಕ್ಕಳಿಗೂ ಗೊತ್ತಿರುವ ವಿಚಾರ. ನಾವು ಆರ್ಟಿಸ್ಟ್‌ಗಳು. ನಮಗೆ ತಲೆಯಲ್ಲಿ ಸಾವಿರ ಆಲೋಚನೆಗಳು ಓಡುತ್ತಾ ಇರುತ್ತವೆ. ನಿಶ್ಯಬ್ದದಲ್ಲಿ ಮಾತ್ರ ನಮ್ಮ ಮನಸ್ಸು ಶಾಂತವಾಗಿರುತ್ತದೆ.

ಯಾರೇ ಆಗಲಿ ರೈಲನ್ನು ಬುಕ್‌ ಮಾಡಿಕೊಂಡು ಟ್ರಾವೆಲ್‌ ಮಾಡುವಾಗ ಮೊದಮೊದಲು ತುಂಬಾನೇ ಎಕ್ಸೈಟ್‌ಮೆಂಟ್‌ ಇರುತ್ತದೆ. ಎಲ್ಲರೂ ವರ್ಷಗಳ ನಂತರ ಭೇಟಿಯಾಗಿರಬಹುದು. ಅಥವಾ ಟ್ರಿಪ್‌ನ ಎಕ್ಸೈಟ್‌ಮೆಂಟ್‌ ಇರಬಹುದು. ಆದರೆ ಗಂಟೆಗಳು ಕಳೆದರೂ ಅದು ನಿಲ್ಲದೇ ಹೋದರೆ ಇತರರಿಗೆ ಕಿರಿಕಿರಿ ಆಗೋದಿಲ್ವಾ? ರೈಲಿನಲ್ಲಿ 40 ಮಧ್ಯವಯಸ್ಕ ಪುರುಷರು ಖುಷಿಯಲ್ಲಿ ಆಗಮಿಸಿದರು. 56 ಸೀಟರ್‌ಗಳಿದ್ದ ಕೋಚ್‌ನಲ್ಲಿ 40 ಜನರ ಗ್ಯಾಂಗ್‌ ತುಂಬಿತ್ತು. ಒಂದು ನಿಮಿಷ ಗ್ಯಾಪ್‌ ಇಲ್ಲದಂತೆ ಸತತವಾಗಿ ಇವರೆಲ್ಲರೂ ಐದು ಗಂಟೆಗಳ ಕಾಲ ಮಾತನಾಡಿದ್ದಾರೆ.

ಭಾರತದ ಸಮಸ್ಯೆ ಏನು ಅಂದರೆ ಇದನ್ನು ಕೇಳೋರು ಯಾರೂ ಇಲ್ಲ! ಹೌದು, ಇದು ಬಾಯಿಬಿಟ್ಟು ಹೇಳದೇ ಇರುವ ರೂಲ್ಸ್‌. ಅವರು ಗಲಾಟೆ ಮಾಡಬೇಕು, ಉಳಿದವರು ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳಬೇಕು. ನನಗೆ ತಡೆದುಕೊಳ್ಳಲು ಆಗಲಿಲ್ಲ. ಟಿಟಿಇ ಅವರನ್ನು ಕರೆದು ನನಗೆ ಇಲ್ಲಿ ಕೂರಲು ಆಗುತ್ತಿಲ್ಲ ಬೇರೆ ಕೋಚ್‌ನಲ್ಲಿ ಜಾಗ ಕೊಡುತ್ತೀರಾ ಎಂದು ಕೇಳಿದೆ. ರೈಲು ಬುಕ್‌ ಆಗಿದ್ದ ಕಾರಣ ಯಾವ ಸೀಟ್‌ ಕೂಡ ಖಾಲಿ ಇರಲಿಲ್ಲ.

ನನ್ನ ಕಿವಿಯನ್ನು ನಾನೇ ಮುಚ್ಚಿಕೊಂಡು ಸಮಾಧಾನಿಸಿಕೊಳ್ಳಲು ಪ್ರಯತ್ನಿಸಿದೆ. ಆ ಮಧ್ಯದಲ್ಲಿ ಎಂಟು ಮಂದಿ ಪುರುಷರು ಉನೋ ಆಡೋದಕ್ಕೆ ಆರಂಭಿಸಿದರು. ನಗು, ಕೇಕೆ, ಮಾತು ಎಲ್ಲವೂ ಇರಿಟೇಟ್‌ ಆಗುವಂತಿತ್ತು. ಆಗ ಸಿಟ್ಟು ನೆತ್ತಿಗೇರಿತು. ಮತ್ತೆ ಟಿಟಿಇ ಅವರನ್ನು ಕರೆದು ಸದ್ದು ಮಾಡದಂತೆ ಮನವಿ ಮಾಡಿದೆ. ಟಿಟಿಇ ಅವರ ಬಳಿ ಹೋಗಿ ಗಲಾಟೆ ಮಾಡಬೇಡಿ ಎಂದರು ತಕ್ಷಣ ಗಲಾಟೆ ನಿಂತುಹೋಯ್ತು. ಆಮೇಲೆ ಟಿಟಿಇ ಅವರು ನನ್ನನ್ನು ತಮಾಷೆ ಮಾಡುವಂತೆ ಆ ಗುಂಪನ್ನು ಉದ್ದೇಶಿಸಿ ʼ ಯಾಕೆ ಸರ್‌ ಗಲಾಟೆ ಮಾಡ್ತಿದ್ದೀರಿ?ʼ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಆಗ ಇಡೀ ಗುಂಪಿನ ಜನ ಗಹಗಹಿಸಿ ನಕ್ಕರು. ನಂತರ ʼ ನೀವು ಬನ್ನಿ ಸರ್‌ ಆಟಾಡೋಣʼ ಎಂದು ಟಿಟಿಇ ಅವರನ್ನೇ ಕರೆದರು.

ಇಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವ ಪ್ರಶ್ನೆ ಹುಟ್ಟೋದೇ ಇಲ್ಲ. ನನ್ನನ್ನು ಸೇರಿ ಭಾರತೀಯರು ಸಿವಿಕ್‌ ಸೆನ್ಸ್‌ ಮರೆತುಬಿಟ್ಟರಾ? ಈ ರೀತಿ ಜನರಿರುವವರೆಗೂ ನಮ್ಮ ದೇಶ ಉದ್ದಾರ ಆಗೋಕೆ ಸಾಧ್ಯವಾ? ಇದರ ಜೊತೆಗೆ ಜೋರಾದ ಸೌಂಡ್‌ನಲ್ಲಿ ಬಾಲಿವುಡ್‌ ಹಾಡುಗಳನ್ನು ಹಾಕಿ ಗಲಾಟೆ ಮಾಡಿದರು. ಈ ದೇಶವನ್ನು ದೇವರೇ ಕಾಪಾಡಬೇಕು ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಭಾರತ ಮುಂದುವರಿಯುತ್ತಿರುವ ರಾಷ್ಟ್ರ. ನಮ್ಮ ದೇಶದ ಬಗ್ಗೆ ಹೀಗೇಕೆ ಮಾತನಾಡ್ತೀರಿ? ನಮ್ಮ ದೇಶ ವಿಶ್ವಗುರು ಆಗಲು ಹೊರಟಿದೆ. ಪ್ರತೀ ಕ್ಷಣಗಳನ್ನು ಎಂಜಾಯ್‌ ಮಾಡೋದನ್ನು ಅಭ್ಯಾಸ ಮಾಡಿ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಕರೆಕ್ಟ್‌ ಹೇಳಿದ್ದೀರಿ ಶಿವಶ್ರೀ. ಭಾರತದಲ್ಲಿ ಶಬ್ದ ಮಾಲಿನ್ಯ ಹಾಗೂ ಸಿವಿಕ್‌ ಸೆನ್ಸ್‌ಗೆ ಪ್ರಾಮುಖ್ಯತೆಯೇ ಇಲ್ಲ. ಸಾರ್ವಜನಿಕ ಜಾಗದಲ್ಲಿ ಸದ್ದಿನೊಂದಿಗೆ ಸೆಲಬ್ರೇಟ್‌ ಮಾಡೋದು ಮಾಮೂಲಿ ಆಗಿದೆ ಎಂದಿದ್ದಾರೆ.

Must Read