September 26, 2026
Saturday, September 26, 2026
spot_img

ಕುಶಾವತಿ ನದಿ ತೀರದಲ್ಲಿ ಮೃತಿಕಾ ವಿಸರ್ಜನೆ: ಪರ್ತಗಾಳಿ ಶ್ರೀಗಳ ಚಾತುರ್ಮಾಸ್ಯ ವ್ರತ ಸಂಪನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕುಶಾವತಿ ನದಿ ತೀರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೃತಿಕಾ ವಿಸರ್ಜನೆ ನಡೆಸುವ ಮೂಲಕ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಶನಿವಾರ ಸಂಪ‌ನ್ನವಾಯಿತು.


ಮೃತಿಕಾ ವಿಸರ್ಜನೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಅನುಷ್ಠಾನಗಳು ನೆರವೇರಿದವು. ಆ.5ರಂದು ಶ್ರೀಗಳು ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದು, 53 ದಿನಗಳ ಬಳಿಕ ಶನಿವಾರ ವ್ರತ ಸಂಪ‌ನ್ನವಾಯಿತು. ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ 10ನೇ ಚಾತುರ್ಮಾಸ ವ್ರತ ಇದಾಗಿದ್ದು, ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.


ಈ ಸಂಧರ್ಭ ಮೃತಿಕಾ ವಿಸರ್ಜನೆಯ ಬಳಿಕ ನಡೆದ ಧರ್ಮಸಭೆಯಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ದಾನಿಗಳು ಹಾಗೂ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.


ಸೆ.27ರಂದು ದಿಗ್ವಿಜಯ ಮಹೋತ್ಸವ


ಚಾತುರ್ಮಾಸ್ಯ ವ್ರತದ ಸಮಾರೋಪದ ಅಂಗವಾಗಿ ಸೆ.೨೭ರಂದು ಭವ್ಯ ದಿಗ್ವಿಜಯ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಮೆರವಣಿಗೆ ನಡೆಯಲಿದ್ದು, ವಿವಿಧ ಆಕರ್ಷಕ ಟ್ಯಾಬ್ಲೋಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಲಿವೆ. ಶ್ರೀರಾಮನ ಕಂಚಿನ ಪ್ರತಿಮೆ ಇರುವ ಮಾರ್ಗದ ಮೂಲಕ ಸ್ವಾಮೀಜಿಯವರ ದಿವ್ಯ ರಥವು ಮಾರುತಿ ಗುಡಿಯವರೆಗೆ ತೆರಳಿದ್ದು, ಅಲ್ಲಿ ಗೋವಾದ ಪಾರಂಪರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾಣಕೋಣದ 11 ಮಂದಿರಗಳ ವತಿಯಿಂದ 11 ವಿಶೇಷ ದ್ವಾರಗಳನ್ನು ನಿರ್ಮಿಸಲಾಗಿದ್ದು, ಪ್ರತಿಯೊಂದು ದ್ವಾರದ ಬಳಿಯೂ ಶ್ರೀಗಳ ರಥೋತ್ಸವ ನಿಲ್ಲಲಿದೆ.


ಗೋವಾದ ವೈವಿಧ್ಯಮಯ ಕಲೆ, ಸಂಸ್ಕೃತಿ, ನೃತ್ಯ ಹಾಗೂ ವೈಭವವನ್ನು ಅನಾವರಣಗೊಳಿಸುವ ಈ ದಿಗ್ವಿಜಯ ಮಹೋತ್ಸವ ಐತಿಹಾಸಿಕವಾಗಲಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಹೈದರಾಬಾದ್ ಸೇರಿದಂತೆ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಅನಿಲ ಪೈ ಅವರು ಮನವಿ ಮಾಡಿದ್ದಾರೆ.

Must Read