September 26, 2026
Saturday, September 26, 2026
spot_img

ಅನ್ನಂ ಬ್ರಹ್ಮ ಮಾಲಿಕೆ | ಮಿಶ್ರ ತಳಿಯ ಹಾಲು ಶರೀರಕ್ಕೆ ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಮಿಶ್ರ ತಳಿ ಹಸುವಿನ ಹಾಲು ಅಹಿತ ಎಂಬುದಾಗಿ ಇಂದಿನ ವಿಜ್ಞಾನವೂ ಒಪ್ಪಿದೆ. ಆದರೆ ದುಡ್ಡಿನ ಹಿಂದೆ ಜಗತ್ತು ಓಡುತ್ತಿರುವುದರಿಂದ ಅದನ್ನು ಒಪ್ಪಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಶನಿವಾರದ ’ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು.


ಆಧುನಿಕ ವಿಜ್ಞಾನವೂ ಕೂಡಾ ದೇಶಿ ಗೋವು ಹಾಗೂ ಮಿಶ್ರತಳಿಯ ಹಾಲು, ತುಪ್ಪಗಳನ್ನು ವಿಶ್ಲೇಷಿಸಿದ್ದು, ದೇಶಿ ಗೋವಿನ ಹಾಲು ಮತ್ತು ತುಪ್ಪುಗಳು ಶ್ರೇಷ್ಠ ಎಂಬುದಾಗಿ ದೃಢೀಕರಿಸಿವೆ. ಗೋವಿನ ಉತ್ಪನ್ನಗಳು ಜೀರ್ಣಕ್ರಿಯೆಗೆ ಪೂರಕವಾದರೆ, ಮಿಶ್ರತಳಿಯ ಉತ್ಪನ್ನಗಳು ಜೀರ್ಣಕ್ರಿಯೆಗೆ ಸಹಕಾರಿಯಲ್ಲ. ಆಧುನಿಕ ವಿಜ್ಞಾನ ಅದರ ಭಾಷೆಯಲ್ಲಿ ಹೇಳಿದರೆ, ಆಯುರ್ವೇದ ಅಗ್ನಿದೀಪಕ, ಲಘು, ಪಾಚನ ಇತ್ಯಾದಿಯಾಗಿ ಅದರ ಭಾಷೆಯಲ್ಲಿ ಹೇಳಿದೆ. ದೇಶಿ ಗೋವು ಹಾಗೂ ಮಿಶ್ರ ತಳಿಯ ಹಸುವಿನ ವಿಷಯದಲ್ಲಿ ಇವೆರಡೂ ಒಂದನ್ನೇ ಹೇಳುತ್ತಿವೆ ಎಂದು ಶ್ರೀಗಳು ಹೇಳಿದರು.

ಇಂದು ಎಷ್ಟೋ ಆಯುರ್ವೇದ ಔಷಧಗಳಲ್ಲಿ ಮಿಶ್ರ ತಳಿ ಹಸುವಿನ ತುಪ್ಪವನ್ನು ಬಳಸುತ್ತಿರುವುದರಿಂದ, ಅದು ಪರಿಣಾಮಕಾರಿಯಲ್ಲ ಎಂಬ ಮಾತು ಆಗಾಗ ಕೇಳಿಬರುತ್ತದೆ. ಔಷಧ ತಯಾರಿಕೆಯಲ್ಲಿ ಯೋಗವಾಹಕವಾದ ದೇಶೀ ತುಪ್ಪವನ್ನು ಬಳಸದಿರುವುದೇ ಇದಕ್ಕೆ ಕಾರಣ. ಬದುಕನ್ನು ಬಂಗಾರವಾಗಿಸಲು, ಜೀವವನ್ನು ದೇವರನ್ನಾಗಿ ಮಾಡಲು ತುಪ್ಪ ಸಾಕು. ಇದು ದೇಶಿ ತುಪ್ಪದ ಸಾಮರ್ಥ್ಯ ಎಂದು ಸ್ವಾಮೀಜಿ ವಿವರಿಸಿದರು.

ಗಡ್ಡ ಬಿಟ್ಟು, ವೇಷವನ್ನು ಧರಿಸುವುದರಿಂದ ಋಷಿಯಾಗುವುದಿಲ್ಲ. ಬೇರೆಯವರ ಕಣ್ಣಿಗೆ ಕಾಣದ್ದು ಯಾರ ಕಣ್ಣಿಗೆ ಕಾಣುತ್ತದೆಯೋ ಅವನು ನಿಜವಾದ ಋಷಿ. ಇಂದಿನ ವಿಜ್ಞಾನಿಗಳು ಕೇವಲ ಭೌತಿಕ ಗುಣಗಳನ್ನು ವಿಶ್ಲೇಷಿಸುತ್ತಿದ್ದಾರೆ. ಆದರೆ ಋಷಿಗಳು ಜ್ಞಾನ ದೃಷ್ಟಿಯಿಂದ ಅಪೂರ್ವ ಜ್ಞಾನವನ್ನು ಕಂಡುಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಡಾ. ವಿಶ್ವನಾಥ್ ಭಟ್ ಹಾಗೂ ಡಾ. ವಿದ್ಯಾ ಭಟ್ ದಂಪತಿ ಗುರುಭಿಕ್ಷಾಸೇವೆ ಸಮರ್ಪಿಸಿದರು. ಉದ್ಯಮಿ ಕೆ. ಎಸ್. ಭಟ್ ಮುಂಬಯಿ, ವೆಂಕಟ ರಮಣ ಹೆಗಡೆ ಕವಲಕ್ಕಿ, ಗಣೇಶ್ ಆರ್ಕೊಡ್ಲು, ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶ್ರೀವತ್ಸ ಭೀಮನಕೊಣೆ, ವಿಷ್ಣು ಭಟ್ ಕವಲಕ್ಕಿ, ಶ್ರೀಕೃಷ್ಣ ಶಾಸ್ತ್ರಿ, ಸೌಮ್ಯ ಮಧ್ಯಸ್ಥ, ಅಜಿತ್ ಹೆಗಡೆ ಗುಡ್ಗೆ, ದಿನಪ್ರಧಾನರಾಗಿ ಸೂರ್ಯನಾರಾಯಣ ದಂಪತಿ ಉಪಸ್ಥಿತರಿದ್ದರು.

Must Read