ಕರಾವಳಿಯಲ್ಲಿ ಭಯಂಕರ ಡಿಮಾಂಡ್ ಇರುವ ತಿಂಡಿ ಯಾವುದು ಕೇಳಿದರೆ ‘ಬನ್ಸ್’ ಮಾರ್ರೆ ಎಂಬ ಉತ್ತರ ಕಾಮನ್!
ಬಾಳೆಹಣ್ಣಿನ ಸುವಾಸನೆ… ಸ್ವಲ್ಪ ಸಿಹಿ, ಒಳಭಾಗದಲ್ಲಿ ಮೃದುವಾಗಿರುವ ಲೇಯರ್… ತೆಂಗಿನಕಾಯಿ ಚಟ್ನಿ, ಘರಂ ಸಾಂಬಾರ್ ಜೊತೆ ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಪ್ರತೀ ಹೊಟೇಲ್ನಲ್ಲೂ ಸಾಮಾನ್ಯವಾಗಿರುವ ಈ ತಿಂಡಿಯನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಬೇಕಾಗಿರುವುದು ಬಾಳೆಹಣ್ಣು, ಮೊಸರು, ಹಿಟ್ಟು ಮತ್ತೊಂದಿಷ್ಟು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳು…
ಹಾಗಾದರೆ ಬನ್ನಿ ಮೃದು, ಚೆನ್ನಾಗಿ ಉಬ್ಬುವ ಬನ್ಸ್ ತಯಾರಿಸುವುದು ಹೇಗೆ ನೋಡೋಣ…
ಎಂತ ಎಲ್ಲಾ ಬೇಕು?
ಚೆನ್ನಾಗಿ ಹಣ್ಣಾಗಿರುವ ನಾಲ್ಕು ಬಾಳೆಹಣ್ಣು (ಮೈಸೂರು ತಳಿ ಆದರೆ ಉತ್ತಮ)
ನಾಲ್ಕು ಟೀ ಸ್ಪೂನ್ ಸಕ್ಕರೆ
ನಾಲ್ಕು ಕಪ್ ಮೈದಾ ಅಥವಾ ಗೋಧಿ ಹಿಟ್ಟು
ಒಂದು ಕಪ್ ಸ್ವಲ್ಪ ಹುಳಿ ಇರುವ ಮೊಸರು
ಸ್ವಲ್ಪ ಅಡುಗೆ ಸೋಡಾ
ಎರಡು ಟೀ ಸ್ಪೂನ್ ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು
ಹಿಟ್ಟಿಗಾಗಿ ಎರಡು ಟೀ ಸ್ಪೂನ್ ಎಣ್ಣೆ, ಉಳಿದಂತೆ ಕರಿಯಲು ಬೇಕಾದಷ್ಟು ಎಣ್ಣೆ
ಇನ್ನು ಎಂತ ಮಾಡ್ಬೇಕು?
ಮೊದಲು ಬಾಳೆಹಣ್ಣುಗಳ ಸಿಪ್ಪೆ ತೆಗೆದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಯಾವುದೇ ದೊಡ್ಡ ಗಂಟುಗಳು ಉಳಿಯದಂತೆ ನೋಡಿಕೊಳ್ಳಿ. ನಯವಾದ ಮಿಶ್ರಣವಿರಲಿ.
ಇದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ ಸ್ವಲ್ಪ ಸಮಯ ಬಿಡಿ. ನಂತರ ಮೊಸರು, ಜೀರಿಗೆ, ಉಪ್ಪು ಹಾಗೂ ಅಡುಗೆ ಸೋಡಾ ಸೇರಿಸಿ ಎಲ್ಲವೂ ಒಂದಾಗುವಂತೆ ಮಿಶ್ರಣ ಮಾಡಿ.
ಈಗ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಕಲಸಿ. ಸಾಮಾನ್ಯವಾಗಿ ಬನ್ಸ್ ಹಿಟ್ಟಿಗೆ ಪ್ರತ್ಯೇಕವಾಗಿ ನೀರು ಹಾಕುವ ಅಗತ್ಯವಿರುವುದಿಲ್ಲ. ಬಾಳೆಹಣ್ಣು ಮತ್ತು ಮೊಸರಿನ ತೇವಾಂಶದಲ್ಲೇ ಹಿಟ್ಟು ಹೊಂದಿಕೊಳ್ಳುತ್ತದೆ. ಹಿಟ್ಟು ತುಂಬಾ ಗಟ್ಟಿಯಾಗದಂತೆ, ಮೃದುವಾಗಿ ಕಲಸಿಕೊಳ್ಳಿ.
ಹಿಟ್ಟು ಸಿದ್ಧವಾದ ಬಳಿಕ ಅದರ ಮೇಲೆ ಎರಡು ಟೀಸ್ಪೂನ್ ಎಣ್ಣೆ ಹಚ್ಚಿ ಪಾತ್ರೆಯನ್ನು ಮುಚ್ಚಿಡಿ. ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ಹುದುಗಲು ಬಿಡಬೇಕು. ರಾತ್ರಿ ಹಿಟ್ಟು ತಯಾರಿಸಿ ಬೆಳಗ್ಗೆ ಬನ್ಸ್ ಮಾಡಿದರೆ ಉತ್ತಮವಾಗಿ ಬರುತ್ತದೆ.
ಬನ್ನಿ ಬನ್ಸ್ ಲಟ್ಟಿಸೋಣ…
ಈಗ ಹಿಟ್ಟು ಚೆನ್ನಾಗಿ ಸೆಟ್ ಆದ ಬಳಿಕ ಮತ್ತೊಮ್ಮೆ ಸ್ವಲ್ಪ ಕಲಸಿಕೊಳ್ಳಿ. ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಪ್ರತಿ ಉಂಡೆಯ ಮೇಲೂ ಸ್ವಲ್ಪ ಒಣ ಹಿಟ್ಟು ಹಾಕಿ ಪೂರಿಯಂತೆ ಲಟ್ಟಿಸಿ.
ಹಿಟ್ಟನ್ನು ತುಂಬಾ ತೆಳ್ಳಗೆ ಲಟ್ಟಿಸಬಾರದು. ಸ್ವಲ್ಪ ದಪ್ಪವಾಗಿಯೇ ಲಟ್ಟಿಸಿದರೆ ಎಣ್ಣೆಯಲ್ಲಿ ಕರಿಯುವಾಗ ಚೆನ್ನಾಗಿ ಉಬ್ಬಿ, ಒಳಭಾಗ ಮೃದುವಾಗಿ ಬರುತ್ತದೆ.
ಬನ್ನಿ ಬನ್ನಿ ರೆಡಿ ಮಾಡೋಣ…
ಒಂದು ಕಡಾಯಿಯಲ್ಲಿ ಬನ್ಸ್ ಮುಳುಗುವಷ್ಟು ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಸರಿಯಾದ ಉಷ್ಣತೆಗೆ ಬಂದ ಬಳಿಕ ಲಟ್ಟಿಸಿದ ಬನ್ಸ್ ಅನ್ನು ಒಂದೊಂದನ್ನೇ ನಿಧಾನವಾಗಿ ಹಾಕಿ.
ಬನ್ಸ್ ಎಣ್ಣೆಯಲ್ಲಿ ಉಬ್ಬಲು ಆರಂಭಿಸಿದಾಗ ಮೃದುವಾಗಿ ಒತ್ತಿ ಹಿಡಿಯಬಹುದು. ಎರಡೂ ಬದಿಗಳಿಗೂ ಹೊಂಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಕರಿಯಿರಿ. ಹೆಚ್ಚಿನ ಉರಿಯಲ್ಲಿ ಕರಿದರೆ ಹೊರಭಾಗ ಬೇಗನೆ ಕಂದು ಬಣ್ಣಕ್ಕೆ ತಿರುಗಿ ಒಳಭಾಗ ಸರಿಯಾಗಿ ಬೇಯದಿರುವ ಸಾಧ್ಯತೆ ಇರುತ್ತದೆ. ಇನ್ನು ಕರಿದ ಬನ್ಸ್ಗಳನ್ನು ತೆಗೆದು ಹೆಚ್ಚುವರಿ ಎಣ್ಣೆ ಹೀರಿಕೊಳ್ಳುವಂತೆ ಪೇಪರ್ ಮೇಲೆ ಇಡಿ.
ಇದೀಗ ಹೊರಭಾಗದಲ್ಲಿ ಹಗುರವಾದ ಗರಿಗರಿತನ ಹಾಗೂ ಒಳಭಾಗದಲ್ಲಿ ಮೃದುವಾದ ವಿನ್ಯಾಸ ಹೊಂದಿರುವ ಬನ್ಸ್ ರೆಡಿ!
ಹೆಚ್ಚುವರಿ ಟಿಪ್ಸ್…
ಬನ್ಸ್ಗೆ ಬಳಸುವ ಬಾಳೆಹಣ್ಣು ಚೆನ್ನಾಗಿ ಹಣ್ಣಾಗಿದ್ದರೆ ಸಿಹಿ ಮತ್ತು ಸುವಾಸನೆ ಇನ್ನಷ್ಟು ಉತ್ತಮವಾಗಿರುತ್ತದೆ. ಮೈದಾ ಬದಲಿಗೆ ಮೈದಾ ಮತ್ತು ಗೋಧಿ ಹಿಟ್ಟನ್ನು ಸಮಪ್ರಮಾಣದಲ್ಲಿ ಬಳಸಿಯೂ ತಯಾರಿಸಬಹುದು.
ಮಂಗಳೂರು ಬನ್ಸ್ ಸ್ವಲ್ಪ ಸಿಹಿಯಾಗಿರುವುದರಿಂದ ಖಾರವಾದ ತೆಂಗಿನಕಾಯಿ ಚಟ್ನಿ, ಶೇಂಗಾ ಚಟ್ನಿ ಚಟ್ನಿಯೊಂದಿಗೆ ಸವಿದರೆ ರುಚಿ ಅದ್ಭುತ. ತರಕಾರಿ ಕುರ್ಮಾ ಜತೆಗೆ ಕೂಡ ಇದು ಉತ್ತಮ ಕಾಂಬಿನೇಷನ್.
ಹಿಟ್ಟು ತುಂಬಾ ತೆಳ್ಳಗಾಗದಂತೆ ನೋಡಿಕೊಳ್ಳುವುದು, ಬನ್ಸ್ ಅನ್ನು ದಪ್ಪವಾಗಿ ಲಟ್ಟಿಸುವುದು ಮತ್ತು ಮಧ್ಯಮ ಉರಿಯಲ್ಲಿ ಕರಿಯುವುದು… ಮೃದುವಾದ ಬನ್ಸ್ಗಾಗಿ ಗಮನಿಸಬೇಕಾದ ಪ್ರಮುಖ ಅಂಶಗಳು.



