ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಹೆಜಮಾಡಿ ಕಡಲ ತೀರದಲ್ಲಿ ನಾಡಿಗೆ ಮಾದರಿಯಾಗುವ ಕಾರ್ಯಕ್ರಮವೊಂದು ಭಾನುವಾರ ನಡೆದಿದೆ. ಇಲ್ಲಿನ ಅಳಿವೆ ಪ್ರದೇಶದ ಕಡಲತೀರದಲ್ಲಿ ಮೂಡುಬಿದಿರೆಯ ಆಳ್ವಾಸ್ ಹಾಗೂ ಮೂಡುಬಿದಿರೆ ಪರಿಸರದ ಕುಟುಂಬಗಳ ಸದಸ್ಯರು, ಮಕ್ಕಳು ಹಾಗೂ ಪೋಷಕರು ಒಟ್ಟಾಗಿ ಸೇರಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ವಿಶಿಷ್ಟ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಚ್. ಶಶಿಧರ ಶೆಟ್ಟಿ, ಪರಿಸರ ಸ್ವಚ್ಛತೆಯನ್ನು ಕಾಪಾಡುವುದು ಕೇವಲ ಒಂದು ದಿನದ ಕಾರ್ಯವಾಗದೆ, ಪ್ರತಿಯೊಬ್ಬರ ದೈನಂದಿನ ಜೀವನದ ಜವಾಬ್ದಾರಿಯಾಗಬೇಕು. ವಿಶೇಷವಾಗಿ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ಜವಾಬ್ದಾರಿಯ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ನಾವಿಂದು ಕೇವಲ ಬೀಚ್ ಸ್ವಚ್ಛಗೊಳಿಸುವ ಉದ್ದೇಶದಿಂದ ಇಲ್ಲಿ ಸೇರಿಲ್ಲ. ನಮ್ಮ ಮಕ್ಕಳಿಗೆ ಪರಿಸರದ ವಾಸ್ತವ ಸ್ಥಿತಿಯನ್ನು ಪರಿಚಯಿಸಿ, ನಾವು ಬಳಸುವ ವಸ್ತುಗಳ ಜವಾಬ್ದಾರಿಯುತ ವಿಲೇವಾರಿ ಹಾಗೂ ಪ್ರಕೃತಿಯ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಕ್ಕಳು ಪರಿಸರವನ್ನು ಕೇವಲ ಪುಸ್ತಕದಲ್ಲಿ ಓದುವುದಕ್ಕಿಂತ, ನೇರವಾಗಿ ಪ್ರಕೃತಿಯ ನಡುವೆ ಅದರ ಸ್ಥಿತಿಯನ್ನು ಕಂಡಾಗ ಅದರ ಬಗ್ಗೆ ಹೆಚ್ಚಿನ ಕಾಳಜಿ ಮೂಡುತ್ತದೆ ಎಂದರು.
ಇಂದು ಬೀಚ್ನಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್, ಗಾಜು, ಫೋಮ್ ಸೇರಿದಂತೆ ಹಲವು ವಸ್ತುಗಳನ್ನು ಕಸ ಎಂದು ಮಾತ್ರ ಪರಿಗಣಿಸುವ ಬದಲು, ಸರಿಯಾಗಿ ವಿಂಗಡಿಸಿ ಮರುಬಳಕೆ ಮಾಡಬಹುದಾದ ಸಂಪನ್ಮೂಲಗಳು ಎಂದು ನೋಡಬೇಕು. ಮನೆಯಿಂದಲೇ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ವಿಲೇವಾರಿ ಮಾಡಿದರೆ, ಅದರ ಬಹುಪಾಲನ್ನು ಮರುಬಳಕೆ ಅಥವಾ ಮರುಸಂಸ್ಕರಣೆಗೆ ಬಳಸಬಹುದು. ಆದರೆ ಸೂಕ್ತ ವಿಲೇವಾರಿ ವ್ಯವಸ್ಥೆಯ ಕೊರತೆ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದ ಇಂತಹ ವಸ್ತುಗಳು ಬೀಚ್, ನದಿ ಹಾಗೂ ಜಲಮೂಲಗಳನ್ನು ಸೇರುತ್ತಿವೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.
ಮನೆಮನೆಯಿಂದಲೇ ಕಸವನ್ನು ಮೂಲದಲ್ಲೇ ಸಂಗ್ರಹಿಸಿ, ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸುವ ವ್ಯವಸ್ಥೆ ಬಲಪಡಿಸಿದರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸೇರುವುದನ್ನು ಬಹಳಷ್ಟು ತಡೆಯಬಹುದು. ಇಲ್ಲವಾದರೆ ಜನರು ಕಸ ಎಸೆಯುತ್ತಲೇ ಇರುತ್ತಾರೆ; ಪರಿಸರ ಕಾರ್ಯಕರ್ತರು ಅದನ್ನು ಮತ್ತೆ ಮತ್ತೆ ತೆರವುಗೊಳಿಸುತ್ತಲೇ ಇರಬೇಕಾಗುತ್ತದೆ. ಇದು ಕಾಯಿಲೆಯ ಮೂಲ ಕಾರಣವನ್ನು ನಿವಾರಿಸದೆ ಅದರ ಮೇಲೆ ಬ್ಯಾಂಡೇಜ್ ಹಾಕಿದಂತಾಗುತ್ತದೆ. ಸಮಸ್ಯೆ ಉಂಟಾದ ಬಳಿಕ ಪರಿಹರಿಸುವುದಕ್ಕಿಂತ, ಸಮಸ್ಯೆ ಉಂಟಾಗದಂತೆ ತಡೆಯುವುದು ಮುಖ್ಯ ಎಂದರು.

ಮಕ್ಕಳಲ್ಲಿ ಮೂಡಬೇಕು ನಮ್ಮ ಪರಿಸರದ ಭಾವನೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾವಿಂದು ಇಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದಕ್ಕಿಂತಲೂ ದೊಡ್ಡ ಉದ್ದೇಶದೊಂದಿಗೆ ಸೇರಿದ್ದೇವೆ. ಮುಂದಿನ ಪೀಳಿಗೆಗೆ ಪರಿಸರದ ವಾಸ್ತವ ಸ್ಥಿತಿಯನ್ನು ನೇರವಾಗಿ ತೋರಿಸಿ, ಇಂದಿನಿಂದಲೇ ಅವರಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ ಎಂದರು. ಕುಟುಂಬದ ಸದಸ್ಯರು ಹಾಗೂ ಮಕ್ಕಳು ಬೀಚ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ವಿವಿಧ ರೀತಿಯ ತ್ಯಾಜ್ಯಗಳನ್ನು ಸಂಗ್ರಹಿಸಿ ಪ್ರತ್ಯೇಕಿಸಿದರು.



