ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಸಾಹಸ ಸಿಂಹ, ‘ಕರ್ನಾಟಕ ರತ್ನ’ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ಸಲುವಾಗಿ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಇಂದು ಚಂದನವನದ ತಾರೆಯರು ಹಾಗೂ ಅಭಿಮಾನಿಗಳ ಮಹಾಸಂಗಮವೇ ಏರ್ಪಟ್ಟಿದೆ.
ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ‘ವಿಷ್ಣು ಹಬ್ಬ’ವು ಮುಂಜಾನೆ 6 ಗಂಟೆಯಿಂದಲೇ ಆರಂಭವಾಗಿದ್ದು, ಮಧ್ಯರಾತ್ರಿ 12ರವರೆಗೆ ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯುತ್ತಿದೆ.
1.5 ಕಿ.ಮೀ ಉದ್ದದ ಕನ್ನಡ ಧ್ವಜದೊಂದಿಗೆ ಭವ್ಯ ಮೆರವಣಿಗೆ
ಮುಂಜಾನೆ 6 ಗಂಟೆಗೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನಂದಿ ಲಿಂಕ್ ಗ್ರೌಂಡ್ಸ್ವರೆಗೆ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆ ಇಡೀ ನಗರದ ಗಮನ ಸೆಳೆಯಿತು. ಸುಮಾರು 2 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು 1.5 ಕಿ.ಮೀ ಉದ್ದದ ಬೃಹತ್ ಕನ್ನಡ ಧ್ವಜವನ್ನು ಹೊತ್ತು ಸಾಗುವ ಮೂಲಕ ಸಾಹಸಸಿಂಹನಿಗೆ ಅಭೂತಪೂರ್ವ ಗೌರವ ಸಲ್ಲಿಸಿದರು. ಹಾದಿಯುದ್ದಕ್ಕೂ ಜಮಾಯಿಸಿದ್ದ ಸಾವಿರಾರು ವಿಷ್ಣು ಭಕ್ತರು ಜಯಘೋಷಗಳನ್ನು ಕೂಗಿ ಸಂಭ್ರಮಿಸಿದರು.
ಜ್ಯೋತಿ ಬೆಳಗಿದ ಚಿತ್ರರಂಗದ ಹಿರಿಯ ತಾರೆಯರು
ಬೆಳಿಗ್ಗೆ 9:30ಕ್ಕೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಿನಿರಂಗದ ದಿಗ್ಗಜರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಹಿರಿಯ ನಟರಾದ ಡಾ. ಶ್ರೀನಾಥ್, ಡಾ. ರಮೇಶ್ ಅರವಿಂದ್, ಶ್ರುತಿ, ಡಾ. ಜಯಮಾಲಾ, ಅವಿನಾಶ್, ಮಾಳವಿಕಾ ಅವಿನಾಶ್, ನಿರ್ದೇಶಕ ಎಸ್. ನಾರಾಯಣ್, ರಾಜೇಂದ್ರ ಸಿಂಗ್ ಬಾಬು, ಡಾ. ಸುಂದರರಾಜ್, ಅಭಿಜಿತ್, ಸಿಹಿಕಹಿ ಚಂದ್ರು, ರಮೇಶ್ ಭಟ್ ಹಾಗೂ ಶ್ರೀಮುರಳಿ ಅವರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ದಿನವಿಡೀ ಗೀತ ಗಾಯನ
ಬೆಳಿಗ್ಗೆ 11 ಗಂಟೆಯಿಂದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ವಿಷ್ಣುದಾದಾ ಅಭಿನಯದ ಸೂಪರ್ಹಿಟ್ ಗೀತೆಗಳ ‘ಸಂಗೀತ ರಸಮಂಜರಿ’ ಕಾರ್ಯಕ್ರಮ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿತು. ಇದರ ಬೆನ್ನಲ್ಲೇ ಹಿರಿಯ ಪತ್ರಕರ್ತರು ಪಾಲ್ಗೊಂಡ ‘ಸಂಪಾದಕರ ಕಣ್ಣಲ್ಲಿ ವಿಷ್ಣುವರ್ಧನ್’ ಎಂಬ ವಿಶೇಷ ಸಂವಾದ ಕಾರ್ಯಕ್ರಮ ಕೂಡ ಜರುಗಿತು.
ಇದನ್ನೂ ಓದಿ:
ಸಂಜೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗಿ
ಸಂಜೆ 5 ಗಂಟೆಗೆ ನಡೆಯಲಿರುವ ಪ್ರಮುಖ ವೇದಿಕೆ ಕಾರ್ಯಕ್ರಮಕ್ಕೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಈಗಾಗಲೇ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ನವರಸ ನಾಯಕ ಜಗ್ಗೇಶ್ ಗೋಲ್ಡನ್ ಸ್ಟಾರ್ ಗಣೇಶ್, ನೀನಾಸಂ ಸತೀಶ್, ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ ಹಾಗೂ ನಟಿ ರಚಿತಾ ರಾಮ್ ಸೇರಿದಂತೆ ಸ್ಯಾಂಡಲ್ವುಡ್ನ ಪ್ರಮುಖ ತಾರೆಯರು ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸಂಜೆ 7 ಗಂಟೆಯಿಂದ ವಸಿಷ್ಠ ಸಿಂಹ, ನವೀನ್ ಕೃಷ್ಣ, ಕಾರುಣ್ಯ ರಾಮ್ ಹಾಗೂ ಅಂಕುಶ್ ಏಕಲವ್ಯ ಸೇರಿದಂತೆ ಹಲವು ಯುವ ಕಲಾವಿದರು ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ. ಕೊನೆಯಲ್ಲಿ ವಿಷ್ಣುವರ್ಧನ್ ಅವರ ಸಿನಿಮಾಗೀತೆಗಳಿಗೆ ಅಭಿಮಾನಿಗಳು ಹೆಜ್ಜೆ ಹಾಕುವ ಮೂಲಕ ಈ ಅಮೃತ ಮಹೋತ್ಸವಕ್ಕೆ ಅದ್ಧೂರಿ ತೆರೆ ಬೀಳಲಿದೆ. ಇಡೀ ದಿನದ ಸಂಭ್ರಮಕ್ಕೆ 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಸಾಕ್ಷಿಯಾಗುವ ನಿರೀಕ್ಷೆಯಿದೆ.



