September 27, 2026
Sunday, September 27, 2026
spot_img

ಸಿನಿಮಾ ಸಾಹಸ ದೃಶ್ಯವನ್ನೂ ಮೀರಿಸಿದ ಚೇಸ್‌! ಕಾರಿನ ರೂಫ್ ಹಿಡಿದು 40 ಕಿ.ಮೀ. ಸಾಗಿದ ಪೊಲೀಸ್ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ಕಾರಿನ ರೂಫ್ ಹಿಡಿದು ಪೊಲೀಸ್ ಸಿಬ್ಬಂದಿ ಸುಮಾರು 40 ಕಿ.ಮೀ. ದೂರ ಸಾಗಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಇಷ್ಟಕ್ಕೂ ನಡೆದಿದ್ದೇನು?


ಕೊಯಮತ್ತೂರಿನ ಕೋವಿಲ್ಪಾಳಯಂ ಪೊಲೀಸ್ ಠಾಣೆ ವ್ಯಾಪ್ತಿಯ ವಿಲಾಂಕುರಿಚಿ ಪ್ರದೇಶದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕರ್ನಾಟಕದ ಕಡೆಯಿಂದ ಕೊಯಮತ್ತೂರಿನತ್ತ ಬರುತ್ತಿದ್ದ ಕಾರನ್ನು ಪೊಲೀಸರು ತಡೆದು ಪರಿಶೀಲಿಸಲು ಮುಂದಾಗಿದ್ದರು. ಕಾರಿನ ಹಿಂಭಾಗದಲ್ಲಿ ಹಲವು ಚೀಲಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಅನುಮಾನ ಮೂಡಿತ್ತು. ಪೊಲೀಸರು ಕಾರನ್ನು ಪರಿಶೀಲಿಸಲು ಮುಂದಾದಾಗ ಅದರಲ್ಲಿದ್ದ ಮೂವರು ವ್ಯಕ್ತಿಗಳು ಪೊಲೀಸರನ್ನು ತಳ್ಳಿ, ಕಾರಿನ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಏಕಾಏಕಿ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.

🚨 COP RIDES ON TOP OF MOVING CAR DURING 40-KM CHASE IN COIMBATORE

Kovilpalayam Police chased a car for nearly 40 km after receiving information about suspected smugglers travelling through the Vilankurichi area.

During the pursuit, a policeman reportedly climbed onto the roof… pic.twitter.com/ecVxLbPS5L— contentkikamii (@contentkikamii) September 27, 2026


ಕಾರು ವೇಗವಾಗಿ ಚಲಿಸಲು ಆರಂಭಿಸಿದ ವೇಳೆ ಅಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ವೇಲ್‌ಮುರುಗನ್ ಕಾರಿನ ರೂಫ್‌ಗೆ ಏರಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ವಿಲಾಂಕುರಿಚಿಯಿಂದ ಅವಿನಾಶಿ ಕಡೆಗೆ ಸಾಗಿದ ಕಾರನ್ನು ಪೊಲೀಸರು ಹಿಂದಿನಿಂದ ಸುಮಾರು 40 ಕಿ.ಮೀ. ದೂರ ಬೆನ್ನಟ್ಟಿದ್ದಾರೆ. ಕಾರಿನ ರೂಫ್ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿರುವುದನ್ನು ಕಂಡ ಕೆಲವರು ತಮ್ಮ ಮೊಬೈಲ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಇದೇ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಾರನ್ನು ತಡೆಯಲು ಪೊಲೀಸರು ಮುಂದಿನ ಪೊಲೀಸ್ ತಂಡಗಳಿಗೆ ಮಾಹಿತಿ ನೀಡಿದ್ದು, ಆಂಬುಲೆನ್ಸ್ ಸಿಬ್ಬಂದಿಯ ನೆರವನ್ನೂ ಪಡೆದುಕೊಂಡಿದ್ದಾರೆ. ಅಂತಿಮವಾಗಿ ಅವಿನಾಶಿ ರಸ್ತೆಯಲ್ಲಿ ಪೊಲೀಸ್ ವಾಹನಗಳು ಹಾಗೂ ಆಂಬುಲೆನ್ಸ್ ಮೂಲಕ ಕಾರನ್ನು ಸುತ್ತುವರಿದು ನಿಲ್ಲಿಸಲಾಯಿತು.

ಕಾರಿನಲ್ಲಿ 300 ಕೆ.ಜಿ. ತಂಬಾಕು ಉತ್ಪನ್ನ

ಕಾರನ್ನು ತಡೆದು ಪರಿಶೀಲಿಸಿದಾಗ ಸುಮಾರು 300 ಕೆ.ಜಿ. ಗುಟ್ಕಾ ಹಾಗೂ ಇತರ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ರಾಜಸ್ಥಾನ ಮೂಲದವರಾಗಿದ್ದು, ಬೆಂಗಳೂರಿನಿಂದ ಕೊಯಮತ್ತೂರಿಗೆ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾರ್ಯಾಚರಣೆಯ ವೇಳೆ ನೆರವು ನೀಡಿದ ಆಂಬುಲೆನ್ಸ್ ಸಿಬ್ಬಂದಿ ಹಾಗೂ ಇತರರ ಸಹಕಾರವನ್ನು ಪೊಲೀಸರು ಶ್ಲಾಘಿಸಿದ್ದಾರೆ.

Must Read