September 27, 2026
Sunday, September 27, 2026
spot_img

ಪ್ರಿಪೇಯ್ಡ್ 28 ದಿನದ ರೀಚಾರ್ಜ್‌ಗೆ ಬ್ರೇಕ್? ಮೊಬೈಲ್ ವ್ಯಾಲಿಡಿಟಿ, ಡೇಟಾ ಬಳಕೆಗೆ ಬಂತು TRAI ಹೊಸ ರೂಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:


ಮೊಬೈಲ್ ರೀಚಾರ್ಜ್‌ ಬಳಕೆದಾರರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ 30 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್‌ ಆಯ್ಕೆ ಒದಗಿಸಬೇಕಾಗಿದ್ದು, ಇದಲ್ಲದೆ ಡೇಟಾ ಅಗತ್ಯವಿಲ್ಲದವರಿಗೆ ಕರೆ ಮತ್ತು ಎಸ್‌ಎಂಎಸ್‌ ಮಾತ್ರ ಒಳಗೊಂಡಿರುವ ಪ್ಲಾನ್‌ಗಳಿಗೂ ಅವಕಾಶ ಕಲ್ಪಿಸಬೇಕಾಗಿದೆ.


ಟ್ರಾಯ್ ಹೊರಡಿಸಿರುವ Telecom Consumers Protection (13th Amendment) Regulations, 2026ರ ಮೂಲಕ ಈ ಬದಲಾವಣೆಗಳನ್ನು ಜಾರಿಗೆ ತಂದಿದೆ.

28 ದಿನದ ರೀಚಾರ್ಜ್‌ಗೆ ಹೊಸ ಆಯ್ಕೆ


ಸದ್ಯ ಹಲವು ಟೆಲಿಕಾಂ ಕಂಪನಿಗಳಲ್ಲಿ 28 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್‌ ಪ್ಲಾನ್‌ಗಳು ಸಾಮಾನ್ಯವಾಗಿವೆ. ಇಂತಹ ಪ್ಲಾನ್‌ಗಳ ಬದಲಿಗೆ ಅಥವಾ ಅವುಗಳ ಜೊತೆಗೆ ಗ್ರಾಹಕರಿಗೆ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಆಯ್ಕೆಯನ್ನೂ ಒದಗಿಸಬೇಕು ಎಂದು ಹೊಸ ನಿಯಮದಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ, ಪ್ರತಿ ತಿಂಗಳು ಒಂದೇ ದಿನಾಂಕದಂದು ರೀಚಾರ್ಜ್‌ ನವೀಕರಿಸಿಕೊಳ್ಳಲು ಸಾಧ್ಯವಾಗುವಂತಹ ಕನಿಷ್ಠ ಒಂದು ಆಯ್ಕೆಯನ್ನು ಕೂಡ ಟೆಲಿಕಾಂ ಕಂಪನಿಗಳು ಒದಗಿಸಬೇಕು. ಉದಾಹರಣೆಗೆ, ಬಳಕೆದಾರರು ಒಂದು ತಿಂಗಳ 15ರಂದು ರೀಚಾರ್ಜ್‌ ಮಾಡಿಕೊಂಡಿದ್ದರೆ, ಮುಂದಿನ ತಿಂಗಳ 15ರಂದೇ ನವೀಕರಿಸಿಕೊಳ್ಳುವ ರೀತಿಯ ಆಯ್ಕೆ ಇರಬೇಕು. ಆ ದಿನಾಂಕವೇ ಇಲ್ಲದ ತಿಂಗಳಲ್ಲಿ, ಆ ತಿಂಗಳ ಕೊನೆಯ ದಿನವನ್ನು ಪರಿಗಣಿಸುವ ವ್ಯವಸ್ಥೆಯಿದೆ.


ಡೇಟಾ ಬೇಡ, ಕರೆ-SMS ಮಾತ್ರ ಸಾಕು ಎನ್ನುವವರಿಗೂ ಅವಕಾಶ


ಹೊಸ ನಿಯಮದ ಮತ್ತೊಂದು ಪ್ರಮುಖ ಅಂಶವೆಂದರೆ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಡೇಟಾ ಬಳಸದ ಅಥವಾ ಅತ್ಯಂತ ಕಡಿಮೆ ಡೇಟಾ ಅಗತ್ಯವಿರುವ ಗ್ರಾಹಕರು ಇನ್ನು ಮುಂದೆ ಡೇಟಾ ಒಳಗೊಂಡಿರುವ ಪ್ಲಾನ್‌ಗಳನ್ನೇ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ. ಟೆಲಿಕಾಂ ಕಂಪನಿಗಳು ಕರೆ ಮತ್ತು ಎಸ್‌ಎಂಎಸ್‌ ಸೇವೆಗಳನ್ನು ಮಾತ್ರ ಒಳಗೊಂಡಿರುವ ವಿಶೇಷ ಟ್ಯಾರಿಫ್ ವೋಚರ್‌ಗಳನ್ನು ಒದಗಿಸಬೇಕಾಗುತ್ತದೆ.


ಇದರಿಂದ ಮುಖ್ಯವಾಗಿ ಡೇಟಾ ಬಳಕೆ ಮಾಡದ ಹಿರಿಯ ನಾಗರಿಕರು ಹಾಗೂ ಮೂಲಭೂತ ಕರೆ ಮತ್ತು ಎಸ್‌ಎಂಎಸ್‌ ಸೇವೆ ಬಳಸುವ ಗ್ರಾಹಕರಿಗೆ ತಮ್ಮ ಅಗತ್ಯಕ್ಕೆ ತಕ್ಕ ರೀಚಾರ್ಜ್‌ ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ.


28 ದಿನದ ಎಲ್ಲ ಪ್ಲಾನ್‌ಗಳು 30 ದಿನವಾಗುವುದಿಲ್ಲ


ಹೊಸ ನಿಯಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಮಾಹಿತಿ ಹರಿದಾಡುತ್ತಿದ್ದು, TRAI ಎಲ್ಲ 28 ದಿನಗಳ ರೀಚಾರ್ಜ್‌ ಪ್ಲಾನ್‌ಗಳನ್ನು ಕಡ್ಡಾಯವಾಗಿ 30 ದಿನಗಳನ್ನಾಗಿ ಬದಲಾಯಿಸುವಂತೆ ಸೂಚಿಸಿಲ್ಲ. ಬದಲಾಗಿ, ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ 30 ದಿನಗಳ ಆಯ್ಕೆಯನ್ನು ಒದಗಿಸುವುದು ಮತ್ತು ನಿರ್ದಿಷ್ಟ ಮಾದರಿಯ ಪ್ಲಾನ್‌ಗಳಿಗೆ ಅನುಗುಣವಾಗಿ Voice-SMS-only ಆಯ್ಕೆಯನ್ನೂ ನೀಡುವುದು ನಿಯಮದ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಬಳಕೆದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 28 ದಿನ, 30 ದಿನ ಅಥವಾ ಇತರ ಲಭ್ಯವಿರುವ ವ್ಯಾಲಿಡಿಟಿ ಆಯ್ಕೆಗಳ ನಡುವೆ ರೀಚಾರ್ಜ್‌ ಮಾಡಿಕೊಳ್ಳಬಹುದು.


ಈಗ ಹೊಸ ನಿಯಮದ ಅನುಷ್ಠಾನದೊಂದಿಗೆ ಟೆಲಿಕಾಂ ಕಂಪನಿಗಳು ತಮ್ಮ ಪ್ರೀಪೇಯ್ಡ್ ಪ್ಲಾನ್‌ಗಳ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ.

Must Read