September 28, 2026
Monday, September 28, 2026
spot_img

ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ | ವಿಭಜನೆಯೇ ಕಮ್ಯೂನಿಸ್ಟರ ಸಿದ್ಧಾಂತ : ಕಾಡಸಿದ್ದೇಶ್ವರ ಶ್ರೀಗಳು

ಹೊಸದಿಗಂತ ವರದಿ ಕಲಬುರಗಿ:

ದೇಶದಲ್ಲಿನ ಕಮ್ಯೂನಿಸ್ಟರು ಸಮಾಜದಲ್ಲಿ ಜಗಳ,ಭಿನ್ನಾಭಿಪ್ರಾಯ ಹಾಗೂ ವಿಭಜನೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೋಲಾಪುರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಕಮ್ಯೂನಿಸ್ಟ್ ವಿಚಾರಧಾರೆ,ಕೆಲ ಲಿಂಗಾಯತ ಮುಖಂಡರು ಹಾಗೂ ತಮ್ಮನ್ನು ವಿರೋಧಿಸುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಮ್ಯೂನಿಸ್ಟರ ಕೆಲಸವೇ ಸಮಾಜದಲ್ಲಿ ಜಗಳ ಮತ್ತು ಭಿನ್ನಾಭಿಪ್ರಾಯ ಸೃಷ್ಟಿಸುವುದಾಗಿದೆ. ಮಾಲೀಕ-ಕೂಲಿಕಾರ, ಶ್ರೀಮಂತ-ಬಡವರು, ತಂದೆ-ಮಗ, ಗಂಡ-ಹೆಂಡತಿ ಸೇರಿದಂತೆ ವಿವಿಧ ವರ್ಗಗಳ ನಡುವೆ ಸಂಘರ್ಷ ಹುಟ್ಟುಹಾಕುವ ಕೆಲಸವನ್ನು ಅವರು ಮಾಡುತ್ತಾರೆ. ಹಿಂದೂ-ಮುಸ್ಲಿಂ, ದಲಿತ-ಸವರ್ಣೀಯರ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಗ್ಯಾಂಗ್ ಆಗಿ ಕಮ್ಯೂನಿಸ್ಟರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸಮಾವೇಶದ ಉದ್ದೇಶವನ್ನು ಪ್ರಶ್ನಿಸುವವರಿಗೆ ತಿರುಗೇಟು ನೀಡಿದ ಶ್ರೀಗಳು,ಬಸವಣ್ಣ ಹಾಗೂ ಶಿವಶರಣರ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ.ಕಮ್ಯೂನಿಸ್ಟರು ಸಮಾಜದ ವಿವಿಧ ವರ್ಗಗಳ ನಡುವೆ ಸಂಘರ್ಷ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಧರ್ಮ ಮತ್ತು ಸಂಸ್ಕೃತಿಯ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಬಸವಣ್ಣನವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರೇ ಅವರ ನಿಜವಾದ ವಾರಸುದಾರರು.ಶರಣರ ಕಾಯಕ ಮತ್ತು ದಾಸೋಹದ ಪರಂಪರೆಯನ್ನು ಮುಂದುವರಿಸುವುದೇ ಬಸವಣ್ಣನವರಿಗೆ ನಿಜವಾದ ಗೌರವ ಸಲ್ಲಿಸುವ ಮಾರ್ಗವಾಗಿದೆ. ಸಂವಿಧಾನವು ಎಲ್ಲರಿಗೂ ಧಾರ್ಮಿಕ ಆಚರಣೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದ್ದು, ಬಸವಾದಿ ಶಿವಶರಣರ ಹಿಂದೂ ಸಮಾವೇಶ ನಡೆಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು. ಸಮಾಜದಲ್ಲಿ ಒಗ್ಗಟ್ಟು ಮೂಡಿಸುವುದು ಹಾಗೂ ಬಸವ ತತ್ವಗಳ ಬಗ್ಗೆ ಜಾಗೃತಿ ಮೂಡಿಸುವುದೇ ಸಮಾವೇಶದ ಉದ್ದೇಶವಾಗಿದೆ ಎಂದು ತಿಳಿಸಿದರು.

ಲಿಂಗಾಯತ ಸಮಾಜದಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ಹಾಗೂ ಸಮಾಜವನ್ನು ಒಡೆಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಶ್ರೀಗಳು, ಹಿಂದೂ ಸಂಸ್ಕೃತಿ ಮತ್ತು ವೈದಿಕ ಪರಂಪರೆಯನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ಬಸವಣ್ಣನವರ ಹೆಸರನ್ನು ಬಳಸಿಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಗಳನ್ನು ಬಯಲಿಗೆಳೆಯುವ ಉದ್ದೇಶದಿಂದಲೇ ಈ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.

ಬಸವ ತತ್ವಗಳನ್ನು ಕುರಿತು ಮಾತನಾಡುವ ಕೆಲವರು ತಮ್ಮ ಜೀವನದಲ್ಲಿ ಅವುಗಳನ್ನು ಅನುಸರಿಸುತ್ತಿಲ್ಲ ಎಂದು ಟೀಕಿಸಿದ ಅವರು, ಸಮಾಜದಲ್ಲಿ ಸಮಾನತೆ, ದಯೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಆಚರಣೆಯಲ್ಲಿ ತೋರಿಸುವುದು ಅಗತ್ಯವಾಗಿದೆ. ಬಸವಣ್ಣನವರ ಉಪದೇಶಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Must Read