ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಎಂಟುಗಂಟೆಯಿಂದ ವಾಹನಗಳ ಹಾರ್ನ್ ಸೌಂಡ್ ಆರಂಭವಾದರೆ ಮಧ್ಯರಾತ್ರಿ ಆಗೋವರೆಗೂ ಮುಕ್ತಾಯವಾಗೋದಿಲ್ಲ. ಬೆಂಗಳೂರಿನ ಜನ ಸುರಕ್ಷತಾ ದೃಷ್ಟಿಯಿಂದ ಹಾಂಕ್ ಮಾಡೋದಿಲ್ಲ. ಬದಲಿಗೆ ಆಗಾಗ ಹಾರ್ನ್ ಮಾಡೋದು ಅವರಿಗೆ ಅಭ್ಯಾಸವೇ ಆಗಿಹೋಗಿದೆಯಂತೆ!
ಹೌದು, ವಿಶ್ವ ಕಿವುಡುತನದ ದಿನದ ಅಂಗವಾಗಿ ಬ್ಯೂಟುಫಾಲ್ ಭಾರತ್ ಎಂಬ ಸ್ವಯಂಸೇವಕರ ಗುಂಪು ಸರ್ವೆಯೊಂದನ್ನು ಆಯೋಜಿಸಿತ್ತು. ಇದರಲ್ಲಿ ಭಾಗಿಯಾದ ಜನರಲ್ಲಿ ಶೇ.30 ರಷ್ಟು ಜನರ ಮಾತ್ರ ಹಾರ್ನ್ ಯಾವ ಉದ್ದೇಶಕ್ಕಾಗಿ ಇದೆಯೋ ಅದಕ್ಕೆ ಮಾತ್ರ ಬಳಸುತ್ತಾರೆ. ಇನ್ನುಳಿದ ಜನರು ಟ್ರಾಫಿಕ್ ಹತಾಷೆ ತಾಳಲಾರದೇ, ಎದುರಿಗೆ ಇರುವ ಜನರನ್ನು ಬೈಯಲಾಗದೇ ಹಾರ್ನ್ ಮೇಲೆ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಾರಂತೆ.
ಈ ಸಮೀಕ್ಷೆಯಲ್ಲಿ ಭಾಗವಹಿಸಿದ 259 ಮಂದಿಯ ಪೈಕಿ ಬರೋಬ್ಬರಿ ಶೇ.97 ರಷ್ಟು ರಷ್ಟು ಜನರು, ಬೆಂಗಳೂರಿನಲ್ಲಿ ಅತಿಯಾದ ಹಾರ್ನ್ ಬಳಕೆ ಒಂದು ದೊಡ್ಡ ಸಮಸ್ಯೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ವಾಹನ ಸವಾರರು ಹಾರ್ನ್ ಬಳಸುವ ಪ್ರಮಾಣವನ್ನು ಕಡಿಮೆ ಮಾಡಲು ಸಾಕಷ್ಟು ಅವಕಾಶವಿದೆ ಎಂಬುದನ್ನೂ ಬಹುತೇಕ ಮಂದಿ ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಅತಿಯಾದ ಹಾರ್ನ್ ಬಳಕೆಯು ಶ್ರವಣ ಶಕ್ತಿಯ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಸಾಬೀತಾಗಿದೆ. ಶಾಂತಿಯುತ ದೇಶಗಳ ಜನರಿಗೆ ಹೋಲಿಸಿದರೆ ಭಾರತದಲ್ಲಿನ ಜನರು ಏಳು ವರ್ಷ ಮುಂಚಿತವಾಗಿಯೇ ಶ್ರವಣ ಶಕ್ತಿಯ ನಷ್ಟವನ್ನು ಅನುಭವಿಸುತ್ತಾರೆ ಎಂದು ವರದಿಯು ತಿಳಿಸಿದೆ. ವಾಹನದಲ್ಲಿರುವವರಿಗೆ ಹಾರ್ನ್ ಒಂದು ಪ್ರಮುಖ ಸುರಕ್ಷತಾ ಸಾಧನವೆಂದು ಪರಿಗಣಿಸಲಾಗಿರುವುದರಿಂದ, ಒಂದು ವೇಳೆ ಹಾರ್ನ್ ಕೆಲಸ ಮಾಡದಿದ್ದರೂ ತಾವು ಸುರಕ್ಷಿತವಾಗಿ ವಾಹನ ಚಲಾಯಿಸಲು ಸಾಧ್ಯ ಎಂಬುದು ಶೇ. 68 ರಷ್ಟು ಜನರ ನಂಬಿಕೆ. ಅಲ್ಲದೆ, ಅತಿಯಾದ ಹಾರ್ನ್ ಬಳಕೆಯು ಸಮುದಾಯದ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾಗಿದೆ. ಗಾಡಿಯಲ್ಲಿ ಹಾರ್ನ್ ಯಾವ ಕಾರಣಕ್ಕೆ ಇದೆ ಎನ್ನುವುದನ್ನು ಅರಿತುಕೊಂಡು ಆ ಒಂದು ಕಾರಣಕ್ಕೆ ಅದನ್ನು ಬಳಕೆ ಮಾಡಿದರೆ ಸಾಕಾಗುತ್ತದೆ. ಅನಾವಶ್ಯಕ ಬಳಕೆಯಿಂದ ಶ್ರವಣ ಸಂಬಂಧಿತ ಸಮಸ್ಯೆಗಳು ಬಾಧಿಸುತ್ತವೆ.



