September 28, 2026
Monday, September 28, 2026
spot_img

ಲೇಟಾಗಿ ಬಂದ ಯತೀಂದ್ರ ವಿರುದ್ಧ ತನ್ವೀರ್‌ ಸೇಠ್‌ ಗರಂ: ಮನೆಯಲ್ಲಿ ಅಮ್ಮ ಇರಲಿಲ್ಲ ಅದಕ್ಕೆ ತಡ ಎಂದ ಸಿದ್ದು ಪುತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ದಸರಾಗೆ ಸಂಬಂಧಿಸಿದ ಕಾರ್ಯಕ್ರಮಗಳು ಆರಂಭವಾಗಿವೆ. ಇಂದು ಮಾವುತರ ಉಪಹಾರ ಕೂಡ ಸಮಾರಂಭ ನಡೆದಿದ್ದು, ಸಚಿವ ಯತೀಂದ್ರ ಸಿದ್ದರಾಮಯ್ಯ ಸಮಯಕ್ಕೆ ಸರಿಯಾಗಿ ಬಂದಿಲ್ಲ ಎಂದು ಹಿರಿಯ ಶಾಸಕ ತನ್ವೀರ್‌ ಸೇಠ್‌ ಗರಂ ಆಗಿದ್ದಾರೆ.

ಅಂಬಾವಿಲಾಸ ಅರಮನೆ ಆವರಣದಲ್ಲಿಂದು ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ಉಪಹಾರ ಕೂಟ ಏರ್ಪಡಿಸಲಾಗಿತ್ತು. ಬೆಳಗ್ಗೆ ಒಂಬತ್ತು ಗಂಟೆಯ ಕಾರ್ಯಕ್ರಮಕ್ಕೆ ಯತೀಂದ್ರ ಸಿದ್ದರಾಮಯ್ಯ ಒಂದು ಗಂಟೆ ತಡವಾಗಿ ಆಗಮಿಸಿದ್ದಾರೆ. ಮಾವುತರು ಹಾಗೂ ಕಾವಾಡಿಗಳನ್ನು ಕೂರಿಸಿ, ಬಾಳೆ ಎಲೆ ಹಾಕಿ ಆಗಿತ್ತು. ತಿಂಡಿ ಬಡಿಸುವುದು ಬಾಕಿ ಇತ್ತು. ಹೀಗೆ ತಟ್ಟೆ ಮುಂದೆ ಊಟವಿಲ್ಲದೇ ಒಂದು ಗಂಟೆ ಎಲ್ಲರನ್ನೂ ಕಾಯಿಸಿದ್ದಕ್ಕೆ ತನ್ವೀರ್‌ ಸೇಠ್‌ ಗರಂ ಆಗಿದ್ದಾರೆ.

ಊಟದ ತಟ್ಟೆ ಮುಂದೆ ಕಾಯಿಸೋದು ಸರೀನಾ?

ಕಾದು ಕಾದು ಕೋಪಗೊಂಡ ತನ್ವೀರ್‌ ಸೇಠ್‌, ಸಮಯ ಪ್ರಜ್ಞೆ ಅನ್ನೋದು ಇಲ್ಲವಾ? ಎಲ್ಲರಿಗೂ ಟೈಮ್‌ ಸೆನ್ಸ್‌ ಅನ್ನೋದು ತುಂಬಾ ಮುಖ್ಯ. ತಿಂಡಿ ಕೊಡೋ ಕಾರ್ಯಕ್ರಮಕ್ಕೆ ಊಟದ ಟೈಮ್‌ಗೆ ಬಂದ್ರೆ ಉಪಯೋಗ ಏನು? ತಟ್ಟೆ ಮುಂದೆ ಮಾವುತರನ್ನು ಕಾಯಿಸೋದು ಸರಿಯಾ? ಎಲ್ಲದಕ್ಕೂ ಲಿಮಿಟ್‌ ಅನ್ನೋದು ಇದೆ, ಸಹಿಸಿಕೊಳ್ಳೋಕೆ ಆಗೋದಿಲ್ಲ. ನಾನು ಕಾಯೋದಿಲ್ಲ. ನೀವು ಏನಾದ್ರೂ ಮಾಡ್ಕೊಳಿ ಎಂದು ಹೇಳಿ ಕಾರ್ಯಕ್ರಮದಿಂದ ಎದ್ದು ಹೋಗಿದ್ದಾರೆ.

ಅಮ್ಮ ಇರಲಿಲ್ಲ ಅದಕ್ಕೆ ಲೇಟ್‌: ಯತೀಂದ್ರ

ಬೇಕಂತ ಲೇಟಾಗಿ ಬರಲಿಲ್ಲ. ಮನೆಯಲ್ಲಿ ಅಮ್ಮ ಇರಲಿಲ್ಲ. ಹೊಸ ಮನೆ, ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿವೆ. ಕೆಲಸದವರೂ ಇಲ್ಲ, ಅಮ್ಮನೂ ಇಲ್ಲ. ಕೈಗೆ ಯಾವ ವಸ್ತುಗಳು ಸಿಗುತ್ತಿರಲಿಲ್ಲ ಹೀಗಾಗಿ ಸ್ವಲ್ಪ ತಡ ಆಯ್ತು ಎಂದಿದ್ದಾರೆ.

Must Read