September 28, 2026
Monday, September 28, 2026
spot_img

ಪ್ರಧಾನಿ ಮೋದಿಯವರೇ.. ಅದಾನಿ, ಅಂಬಾನಿ ರೀತಿ ರೈತರ ಸಾಲವನ್ನೂ ಮನ್ನಾ ಮಾಡಿಬಿಡಿ: ಸಚಿವ ಎಂ.ಬಿ. ಪಾಟೀಲ

ಹೊಸದಿಗಂತ ವರದಿ ವಿಜಯಪುರ:

ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಡಾ.ಮನಮೋಹನ್ ಸಿಂಗ್ ಸರ್ಕಾರದ ಮಾದರಿಯಲ್ಲಿ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ‌ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ‌. ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸಹ ಸಾಲ ಮನ್ನಾ‌ ಮಾಡಿದ್ದಾರೆ. ಆದರೆ ಮೋದಿ ಅವರು ಮಾಡಿದ್ದು ದೊಡ್ಡ ದೊಡ್ಡ ‌ಉದ್ಯಮಪತಿಗಳ ಸಾಲವನ್ನು ಮಾತ್ರ. ಇದನ್ನೂ ಬೆಂಬಲಿಸುವ ಬಿಜೆಪಿ ಕೆಲವು ನಾಯಕರು ಅದು ಸಾಲಮನ್ನಾ ಅಲ್ಲ, ರೈಟ್ ಆಫ್ ಇದ್ದಂತೆ ಎಂದು ಹೇಳಿದ್ದಾರೆ. ಇದೇ ರೀತಿ ನಮ್ಮ ರೈತರ ಸಾಲವನ್ನು ಸಹ ಮನ್ನಾ ‌ಮಾಡಿಬಿಡಿ, ಅಂಬಾನಿ, ಅದಾನಿಯಂತೆ ಅನ್ನದಾತನರನ್ನು ತಿಳಿದುಕೊಂಡು ಸಾಲ ಮನ್ನಾ ಮಾಡಿ ಎಂದರು.

ಕೇಂದ್ರ ಸರ್ಕಾರ ಬರಗಾಲದ‌ ವಿಷಯವಾಗಿ ತಾರತಮ್ಯ ನೀತಿ ಅನುಸರಿಸುತ್ತಿದೆ, ಮಳೆ ಆಧಾರಿತ ಕೃಷಿ ಶೇ.100 ರಷ್ಟು ಹಾನಿಯಾಗಿದೆ, ಹತ್ತಿ, ಕಬ್ಬು, ತೊಗರಿ, ಸೂರ್ಯಕಾಂತಿ ಹೀಗೆ ಬಹುತೇಕ ಬೆಳೆಗಳು ಹಾನಿಯಾಗಿವೆ, ಈ ರೀತಿ ಎಲ್ಲಿ ಭೀಕರ ಪರಿಸ್ಥಿತಿ ಉಂಟಾಗಿದೆಯೋ ಅಲ್ಲಿ ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು, ಕೇಂದ್ರ ಬರ ಮಾರ್ಗಸೂಚಿ ಪರಿಷ್ಕರಣೆ ಮಾಡಬೇಕು ಎಂದರು.

ಆದರೆ ಈ‌ ಕೇಂದ್ರ ಸರ್ಕಾರ ವೋಟ್ ಚೋರಿ, ವಾಷಿಂಗ್ ಮಷೀನ್ ಮಾತ್ರ ಗೊತ್ತಿದೆ, ಉಳುವವನೇ ಹೊಲದೊಡೆಯ ಎಂಬ ಯೋಜನೆಗಳನ್ನು ಯಾವತ್ತೂ ರೂಪಿಸಿಲ್ಲ ಎಂದರು.

ಆದರೆ ಈಗ ಬಿಜೆಪಿ ರಿವರ್ಸ್ ಸೈಕಲ್ ಆರಂಭವಾಗಿದೆ, ಅವರ ಕರಾಳ‌ ಮುಖ ಝೆನ್ ಜೀ ಹೋರಾಟದಿಂದ ತಿಳಿದು ಬರುತ್ತಿದೆ. ಅನೇಕರು ಭ್ರಷ್ಟರು ಎಂದು ದೂರಿ ಅವರನ್ನೇ ಪಕ್ಷಕ್ಕೆ ಕರೆದುಕೊಂಡು ಅವರನ್ನೇ ಹೊಗಳಿದ್ದಾರೆ ಎಂದು ದೂರಿದರು.

Must Read