ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಚುರಲ್ ಸ್ಟಾರ್ ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ದಿ ಪ್ಯಾರಡೈಸ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿದೆ. ಪ್ರೀಪೋಸ್ಟ್ ಹಾಗೂ ಪ್ರೀಮಿಯರ್ ಶೋಗಳ ನಂತರ ಚಿತ್ರಕ್ಕೆ ಸಾಧಾರಣ ಮತ್ತು ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಸಿನಿಮಾ ಎಲ್ಲೋ ಒಂದು ಕಡೆ ಫ್ಲಾಪ್ ಆಗಬಹುದು ಎಂದು ವಿಶ್ಲೇಷಕರು ಭಾವಿಸಿದ್ದರು. ಆದರೆ, ಪ್ರೇಕ್ಷಕರ ಅಪಾರ ಬೆಂಬಲದಿಂದಾಗಿ ಎಲ್ಲ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿದ್ದು, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಮಾಯಿ ಮಾಡುತ್ತಿದೆ.
ಮೊದಲ ವಾರಾಂತ್ಯದಲ್ಲೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಬಿಸಿನೆಸ್ ಚೇತರಿಸಿಕೊಂಡು ಬರೋಬ್ಬರಿ 103.75 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ವಿಶೇಷವಾಗಿ, ಭಾನುವಾರ ಒಂದೇ ದಿನ 18.75 ಕೋಟಿ ರೂಪಾಯಿ ಗಳಿಸುವ ಮೂಲಕ ಸಿನಿಮಾ ತನ್ನ ಗಟ್ಟಿತನವನ್ನು ಸಾಬೀತುಪಡಿಸಿದೆ. ಆರಂಭಿಕ ನೆಗೆಟಿವ್ ರಿಪೋರ್ಟ್ಗಳನ್ನು ಮೆಟ್ಟಿ ನಿಂತು ಪ್ರದರ್ಶನ ಕಾಯ್ದುಕೊಂಡಿರುವುದು ನಾನಿ ಅಭಿಮಾನಿಗಳಿಗೆ ದೊಡ್ಡ ಸಮಾಧಾನ ತಂದಿದೆ. ಈ ಸಿನಿಮಾ ಕೇವಲ ತೆಲುಗು ಪ್ರಾಂತ್ಯಗಳಲ್ಲೇ ಸುಮಾರು 80.50 ಕೋಟಿ ರೂಪಾಯಿ ಬಾಚಿಕೊಂಡಿದೆ. ನೈಜಾಂ ಭಾಗ ಒಂದರಲ್ಲೇ 46.25 ಕೋಟಿ ಗಳಿಕೆಯಾಗಿದ್ದರೆ, ಆಂಧ್ರದಿಂದ 25.75 ಕೋಟಿ ಹಾಗೂ ಸೀಡೆಡ್ ಪ್ರದೇಶದಿಂದ 8.50 ಕೋಟಿ ರೂಪಾಯಿ ಹರಿದುಬಂದಿದೆ.
ವಿದೇಶದಲ್ಲೂ ಈ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಓವರ್ಸೀಸ್ ಮಾರುಕಟ್ಟೆಯಲ್ಲಿ ಸುಮಾರು 27.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರೊಂದಿಗೆ ‘ದಿ ಪ್ಯಾರಡೈಸ್’ ಚಿತ್ರದ ಒಟ್ಟು ಜಾಗತಿಕ ಗಳಿಕೆ ಬರೋಬ್ಬರಿ 131 ಕೋಟಿ ರೂಪಾಯಿ ತಲುಪಿದೆ.
ವಾರಾಂತ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರೂ, ‘ದಿ ಪ್ಯಾರಡೈಸ್’ ಚಿತ್ರ ಲಾಭದಾಯಕವಾಗಿ ಪೂರ್ಣಗೊಳ್ಳಲು ಮುಂದಿನ ದಿನಗಳಲ್ಲಿ ತನ್ನ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಆರಂಭಿಕ ಸವಾಲುಗಳನ್ನು ಮೀರಿ ನಿಂತಿರುವ ಈ ಚಿತ್ರ, ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಇನ್ಯಾವ ದಾಖಲೆ ಬರೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.



