ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇದಾರನಾಥ ಮಾರ್ಗದ ಚಿರ್ಬಾಸಾ ಬಳಿ ಇದ್ದಕ್ಕಿದ್ದಂತೆಯೇ ಭೂಮಿ ಬಾಯಿತೆರೆದಿದ್ದು, ಐದು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ನಿನ್ನೆ ತಡರಾತ್ರಿ ಗೌರಿಕುಂಡದ ಬಳಿ ಇರುವ ಚಿರ್ಬಾಸಾ ಬಳಿಯ ಮಾರ್ಗದಲ್ಲಿ ಬೆಟ್ಟದಿಂದ ಇದ್ದಕ್ಕಿದ್ದಂತೆಯೇ ಬಂಡೆ, ಮಣ್ಣು ಕುಸಿದುಬಿದ್ದಿದೆ. ಮೇಲಿನಿಂದ ಬಿದ್ದ ಕಲ್ಲು ಬಡಿದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಈ ಸ್ಥಳದಲ್ಲಿಂದ ಒಟ್ಟಾರೆ 1,500 ಯಾತ್ರಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.
ಉತ್ತರ ಪ್ರದೇಶದ ಇಟಾ ನಗರದ ಬಾಲಕ ಯಶ್ ಮೃತಪಟ್ಟಿದ್ದಾನೆ. ಯಾತ್ರೆಗೆಂದು ಕರೆದುಕೊಂಡು ಬಂದಿದ್ದ ಬಾಲಕ ಈ ರೀತಿ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮಾಹಿತಿ ತಿಳಿದ ಕೂಡಲೇ ಸಬ್ ಇನ್ಸ್ಪೆಕ್ಟರ್ ಆಶಿಶ್ ಡಿಮ್ರಿ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಜಂಟಿ ತಂಡವು ಸ್ಥಳಕ್ಕೆ ದೌಡಾಯಿಸಿದ್ದು, ರಾತ್ರಿಯಿಡಿ ರಕ್ಷಣಾ ಕಾರ್ಯಾಚರಣೆ ನಡೆಸಿ, 1,500 ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.



