ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಹಣಕಾಸಿನ ಹೊರೆ ಇದೀಗ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ.
ಗ್ಯಾರಂಟಿ ಯೋಜನೆಗಳ ವೆಚ್ಚದಿಂದ ರಾಜ್ಯದ ಹಣಕಾಸಿನ ಮೇಲೆ ಒತ್ತಡವಿದೆ ಎಂದು ಕೆಲವು ಸಚಿವರು ಹೇಳಿರುವ ನಡುವೆಯೇ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂಬ ಸಂದೇಶವನ್ನು ಸರ್ಕಾರ ಈಗ ನೀಡಿದೆ.
ಗ್ಯಾರಂಟಿಗೆ ಗಮನಾರ್ಹ ಮೊತ್ತ ಮೀಸಲು
ಈ ಕುರಿತು ಮಾತನಾಡಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಪ್ರತಿವರ್ಷ ಗಮನಾರ್ಹ ಮೊತ್ತವನ್ನು ಮೀಸಲಿಡುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ರೂಪಿಸುವ ಸಂದರ್ಭದಲ್ಲಿ ಯೋಜನೆಗಳ ಒಟ್ಟು ವೆಚ್ಚವನ್ನು ಸುಮಾರು 40 ಸಾವಿರದಿಂದ 45 ಸಾವಿರ ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಯೋಜನೆಗಳು ಜಾರಿಗೆ ಬಂದ ನಂತರ ವಾರ್ಷಿಕ ವೆಚ್ಚ 50 ಸಾವಿರ ಕೋಟಿಯ ಗಡಿ ದಾಟಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಎರಡು ವರ್ಷವೂ ಮುಂದುವರಿಯುತ್ತದೆ
ಇಷ್ಟೊಂದು ದೊಡ್ಡ ಮೊತ್ತದ ಖರ್ಚಿನ ನಡುವೆಯೂ ಸರ್ಕಾರ ತನ್ನ ಹಣಕಾಸಿನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆ ಎಂದು ಪರಮೇಶ್ವರ ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿರುವ ಸರ್ಕಾರ, ಮುಂದಿನ ಎರಡು ವರ್ಷಗಳಲ್ಲೂ ಇದೇ ಬದ್ಧತೆಯನ್ನು ಕಾಯ್ದುಕೊಳ್ಳಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಆದರೆ ಸರ್ಕಾರದ ಮುಂದಿರುವ ಸವಾಲು ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಪರಿಹಾರ ಕ್ರಮಗಳಿಗೆ ಹಣ ಬೇಕಾಗಿದೆ. ಇದರ ಜೊತೆಗೆ ಸರ್ಕಾರಿ ನೌಕರರ ವೇತನ, ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ದಿನನಿತ್ಯದ ಆಡಳಿತ ವೆಚ್ಚಗಳನ್ನೂ ನಿರ್ವಹಿಸಬೇಕಿದೆ.
ಭರವಸೆ ಹಿಂಪಡೆಯುವ ಪ್ರಶ್ನೆಯಿಲ್ಲ
ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಕೂಡ ಇದೇ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದು, ಜನರಿಗೆ ನೀಡಿರುವ ಭರವಸೆಗಳನ್ನು ಹಿಂಪಡೆಯುವ ಪ್ರಶ್ನೆಯಿಲ್ಲ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಪ್ರತಿಪಕ್ಷ ನಾಯಕರು ಈ ಹೇಳಿಕೆಗಳನ್ನು ಆಧಾರವಾಗಿಸಿಕೊಂಡು ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಪ್ರಶ್ನಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ವೆಚ್ಚದಿಂದ ರಾಜ್ಯದ ಹಣಕಾಸಿನ ಮೇಲೆ ಒತ್ತಡ ಹೆಚ್ಚಾಗಿದೆಯೆಂದು ಆರೋಪಿಸುತ್ತಿದ್ದಾರೆ.
ಒಂದೆಡೆ ಜನರಿಗೆ ನೀಡಿರುವ ಯೋಜನೆಗಳನ್ನು ನಿರಂತರವಾಗಿ ನಡೆಸುವ ಹೊಣೆಗಾರಿಕೆ, ಮತ್ತೊಂದೆಡೆ ಬರ ಸೇರಿದಂತೆ ತುರ್ತು ಪರಿಸ್ಥಿತಿಗಳಿಗೆ ಹಣ ಹೊಂದಿಸುವ ಅಗತ್ಯ ಈ ಎರಡರ ನಡುವೆ ಸರ್ಕಾರ ಹಣಕಾಸಿನ ಸಮತೋಲನ ಸಾಧಿಸಬೇಕಿದೆ.



