ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಕುಡಿಯುವ ಬಾಟಲಿ ನೀರು ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಚರ್ಚೆಗೆ ಬಂದಿದೆ. ದೇಶದ ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ಗಳಲ್ಲಿ ಒಂದಾದ ಬಿಸ್ಲೇರಿಯ ನೀರಿನ ಮಾದರಿ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿದ್ದು, ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಹಾರ ಸುರಕ್ಷತಾ ನಿಯಂತ್ರಕ ಅನುಮತಿ ನೀಡಿದೆ. ಈ ಬೆಳವಣಿಗೆ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI), ಬಿಸ್ಲೇರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆ 2006ರ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ಅನುಮತಿ ನೀಡಿರುವುದಾಗಿ ತಿಳಿಸಿದೆ.
ನೀರಿನ ಮಾದರಿಯಲ್ಲಿ ಏನು ಪತ್ತೆಯಾಗಿದೆ?
ಬಿಸ್ಲೇರಿ ಸಂಸ್ಥೆಯ ಘಟಕದಿಂದ ‘ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ (ಮಿನರಲ್ ವಾಟರ್ ಹೊರತುಪಡಿಸಿ)’ ವಿಭಾಗಕ್ಕೆ ಸೇರಿದ ನೀರಿನ ಮಾದರಿಯನ್ನು ನಿಯಂತ್ರಕ ಸಂಸ್ಥೆ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು. ಪರೀಕ್ಷೆಯಲ್ಲಿ ನೀರಿನ ಮಾದರಿಯಲ್ಲಿ ಬ್ರೋಮೇಟ್ ಅಂಶ ನಿಗದಿತ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿದೆ. ಇದರಿಂದ ಮಾದರಿಯನ್ನು ಆಹಾರ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಅಸುರಕ್ಷಿತ ಎಂದು ಘೋಷಿಸಲಾಗಿದೆ ಎಂದು FSSAI ತಿಳಿಸಿದೆ.
ಇದನ್ನೂ ಓದಿ:
ಈ ವರದಿಯನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿದ ಬಳಿಕ, ಮಾದರಿಯನ್ನು ಮರುಪರಿಶೀಲನೆಗಾಗಿ ರೆಫರಲ್ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಪರೀಕ್ಷೆಯ ವೇಳೆ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAHs) ಪತ್ತೆಯಾಗಿದ್ದು, ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಕಂಪನಿ ವಿರುದ್ಧ ವಿಚಾರಣೆಗೆ ಅನುಮತಿ
ಎರಡೂ ಪ್ರಯೋಗಾಲಯಗಳ ಪರೀಕ್ಷಾ ವರದಿಗಳ ಆಧಾರದಲ್ಲಿ ಆಹಾರ ಸುರಕ್ಷತಾ ಕಾನೂನಿನ ಉಲ್ಲಂಘನೆ ನಡೆದಿರುವುದು ದೃಢಪಟ್ಟಿದೆ ಎಂದು FSSAI ತಿಳಿಸಿದೆ. ಹೀಗಾಗಿ ಬಿಸ್ಲೇರಿ ಇಂಟರ್ನ್ಯಾಷನಲ್ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆ 2006ರ ಅಡಿಯಲ್ಲಿ ಕಾನೂನು ಕ್ರಮ ಆರಂಭಿಸಲು ಅನುಮತಿ ನೀಡಲಾಗಿದೆ.



