ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿದ್ಯುತ್ ಚಾಲಿತ ಸಂಚಾರದತ್ತ ನಗರದ ಜನರ ಒಲವು ಮತ್ತೊಮ್ಮೆ ಸ್ಪಷ್ಟವಾಗಿದೆ ಗೋಚರಿಸುತ್ತಿದೆ.
2026ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಒಟ್ಟು 76,508 ಹೊಸ ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ 13,389 ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿವೆ. ಅಂದರೆ, ಹೊಸದಾಗಿ ನೋಂದಣಿಯಾದ ಪ್ರತಿ ಆರು ವಾಹನಗಳಲ್ಲಿ ಸರಿಸುಮಾರು ಒಂದು ವಾಹನ EV ಆಗಿದೆ.
ಸಾರಿಗೆ ಇಲಾಖೆ ಅಂಕಿ-ಅಂಶಗಳಲ್ಲೇನಿದೆ?
ಸಾರಿಗೆ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ ಸರಾಸರಿ 430ಕ್ಕೂ ಹೆಚ್ಚು EVಗಳು ರಸ್ತೆಗಿಳಿದಿವೆ. ಇದರಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳದ್ದೇ ದೊಡ್ಡ ಪಾಲು. ಒಟ್ಟು 13,389 EV ನೋಂದಣಿಗಳ ಪೈಕಿ 9,453 ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳು ಸೇರಿವೆ. ಇದೇ ಅವಧಿಯಲ್ಲಿ 1,258 ಎಲೆಕ್ಟ್ರಿಕ್ ಕಾರುಗಳು ನೋಂದಣಿಯಾಗಿವೆ.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಇರುವ EVಗಳೆಷ್ಟು?
ರಾಜ್ಯದ ಒಟ್ಟಾರೆ EV ಮಾರುಕಟ್ಟೆಯಲ್ಲೂ ಬೆಂಗಳೂರು ತನ್ನ ಪ್ರಾಬಲ್ಯ ಮುಂದುವರಿಸಿದೆ. ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ 26,636 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದರೆ, ಬೆಂಗಳೂರೊಂದರಲ್ಲೇ 13,389 ನೋಂದಣಿಯಾಗಿವೆ. ಅಂದರೆ ರಾಜ್ಯದ ಮಾಸಿಕ EV ನೋಂದಣಿಯಲ್ಲಿ ಬೆಂಗಳೂರಿನ ಪಾಲು 50.3%.
ಒಟ್ಟಾರೆ ವಾಹನಗಳ ಸಂಖ್ಯೆಯಲ್ಲೂ ನಗರದ ಸ್ಥಾನ ಗಮನಾರ್ಹವಾಗಿದೆ. ಆಗಸ್ಟ್ 30ರ ವೇಳೆಗೆ ಬೆಂಗಳೂರಿನಲ್ಲಿ ಸುಮಾರು 4.9 ಲಕ್ಷ EVಗಳು ನೋಂದಣಿಯಾಗಿದ್ದವು. ಕರ್ನಾಟಕದ ಒಟ್ಟು EVಗಳ ಸಂಖ್ಯೆ ಸುಮಾರು 8.9 ಲಕ್ಷವಾಗಿದ್ದು, ರಾಜ್ಯದ EV ಪೈಕಿ ಸುಮಾರು 56% ಬೆಂಗಳೂರಿನಲ್ಲೇ ಇವೆ.
ಆದರೆ EVಗಳ ಸಂಖ್ಯೆ ಹೆಚ್ಚುತ್ತಿದ್ದರೂ, ನಗರದ ಒಟ್ಟು ವಾಹನ ಬಳಕೆಗೆ ಹೋಲಿಸಿದರೆ ಅವುಗಳ ಪಾಲು ಇನ್ನೂ ಕಡಿಮೆ ಇದೆ. ಬೆಂಗಳೂರಿನ ಒಟ್ಟು ನೋಂದಾಯಿತ ವಾಹನಗಳ ಸಂಖ್ಯೆ ಸುಮಾರು 1.3 ಕೋಟಿ ಇದ್ದು, EVಗಳ ಪಾಲು ಸುಮಾರು 3.8% ಮಾತ್ರಇದೆ.
ಅಂಕಿ-ಅಂಶಗಳು ವಿದ್ಯುತ್ ವಾಹನಗಳತ್ತ ವೇಗವಾಗಿ ಬದಲಾಗುತ್ತಿರುವ ಪ್ರಯಾಣವನ್ನು ತೋರಿಸುತ್ತಿದ್ದರೂ, ಒಟ್ಟು ವಾಹನ ಬಳಕೆಯಲ್ಲಿ EVಗಳ ಪಾಲು ಹೆಚ್ಚಿಸಲು ಇನ್ನಷ್ಟು ಬೆಳವಣಿಗೆ ಅಗತ್ಯವಿದೆ.



