ಹೊಸದಿಗಂತ ವರದಿ ಬೆಳಗಾವಿ:
ನಗರದಲ್ಲಿ ಅಕ್ರಮ ಮಟ್ಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಒಟ್ಟು 9,800 ರೂ. ನಗದು ಹಾಗೂ ಮಟಕಾ ಚೀಟಿಗಳನ್ನು ಜಪ್ತಿ ಮಾಡಲಾಗಿದೆ.
ನ.20ರಂದು ಶಹಾಪುರ ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿದರು. ಶಹಾಪುರ ಠಾಣೆಯ ಪಿಎಸ್ಐ ಹೊನ್ನಪ್ಪ ತಳವಾರ ನೇತೃತ್ವದಲ್ಲಿ ಖಾಸಬಾಗದ ಮರಗಮ್ಮ ಗಲ್ಲಿಯಲ್ಲಿ ದಾಳಿ ನಡೆಸಿ ಸಂತೋಷ ನಾರಾಯಣ ಕನುಕಲಿ (53) ಹಾಗೂ ಶುಭಂ ಸಂತೋಷ ಕನುಕಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ 2,380 ರೂ. ನಗದು ಜಪ್ತಿ ಮಾಡಿದ್ದು, ಮಟಕಾ ಹಣವನ್ನು ಗಜಾನನ ಗರಡ ಎಂಬಾತನಿಗೆ ನೀಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ಇನ್ನೊಂದೆಡೆ, ಮಾಳಮಾರುತಿ ಠಾಣೆಯ ಪಿಎಸ್ಐ ಆನಂದ ಆದಗೊಂಡ ನೇತೃತ್ವದಲ್ಲಿ ಯಮುನಾಪುರದ ಕೊಲ್ಲಾಪುರ ಹೋಟೆಲ್ ಬಳಿ ದಾಳಿ ನಡೆಸಿ ಹೊಳೆಪ್ಪ ಶಂಕರ ಗಸ್ತಿ (32) ಹಾಗೂ ಅರ್ಜುನ ಪರಶುರಾಮ ಕೋಳಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ 7,420 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಎರಡೂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಅಕ್ರಮ ಮಟಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



