September 29, 2026
Tuesday, September 29, 2026
spot_img

ಪಿ.ಟಿ. ಉಷಾ 42 ವರ್ಷಗಳ ಹಳೆಯ ದಾಖಲೆ ಉಡೀಸ್: ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ವಿತ್ಯಾ ರಾಮರಾಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೆಟಿಕ್ಸ್‌ ವಲಯದಿಂದ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಭಾರತದ ಉದಯೋನ್ಮುಖ ಆಟಗಾರ್ತಿ ವಿತ್ಯಾ ರಾಮರಾಜ್, ಭಾರತದ ‘ಚಿನ್ನದ ಹುಡುಗಿ’ ಪಿ.ಟಿ. ಉಷಾ ಅವರ 42 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಧೂಳೀಪಟ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.

ಮಳೆಯ ಸವಾಲಿನ ನಡುವೆಯೂ ಅದ್ಭುತವಾಗಿ ಓಡಿ ಕಂಚಿನ ಪದಕ ಮುಡಿಗೇರಿಸಿಕೊಂಡಿರುವ ವಿತ್ಯಾ, ಇಂದು (ಸೆ. 29) ನಡೆಯಲಿರುವ ರಿಲೇ ರೇಸ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯಾಗಿದ್ದಾರೆ.

ಪಿ.ಟಿ. ಉಷಾ ದಾಖಲೆ ಮುರಿದ ವಿತ್ಯಾ

1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪಿ.ಟಿ. ಉಷಾ ಅವರು ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ 55.42 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಅಂದಿನಿಂದ ಈ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಸೋಮವಾರ ನಗೋಯಾದ ಮಿಜುಹೊ ಸ್ಟೇಡಿಯಂನಲ್ಲಿ ನಡೆದ ಫೈನಲ್ ರೇಸ್‌ನಲ್ಲಿ ವಿತ್ಯಾ ರಾಮರಾಜ್ ಅವರು ಕೇವಲ 54.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಪಿ.ಟಿ. ಉಷಾ ಅವರ 42 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.

ಮಳೆಯ ನಡುವೆಯೂ ಅತ್ಯುತ್ತಮ ಪ್ರದರ್ಶನ

ಪಂದ್ಯದ ವೇಳೆ ಮಳೆ ಬೀಳುತ್ತಿದ್ದರಿಂದ ಟ್ರ್ಯಾಕ್ ಸಂಪೂರ್ಣವಾಗಿ ತೇವವಾಗಿತ್ತು. ಈ ಕಠಿಣ ಪರಿಸ್ಥಿತಿಯಲ್ಲೂ ವಿತ್ಯಾ ಎಲ್ಲಾ 10 ಹರ್ಡಲ್ಸ್‌ಗಳನ್ನು ಯಶಸ್ವಿಯಾಗಿ ದಾಟಿ ವೈಯಕ್ತಿಕ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಯುಎಇಯ ಮರಿಯಮ್ ಕರೀಮ್ ಚಿನ್ನ (54.31 ಸೆಕೆಂಡ್) ಹಾಗೂ ಕಜಕಿಸ್ತಾನದ ಅಡೆಲಿನಾ ಜೆಮ್ಸ್ ಬೆಳ್ಳಿ (54.58 ಸೆಕೆಂಡ್) ಗೆದ್ದುಕೊಂಡರು.

ಇಂದು ಚಿನ್ನದ ಪದಕದ ಮೇಲೆ ಕಣ್ಣು

ವಿತ್ಯಾ ಅವರ ಈ ಐತಿಹಾಸಿಕ ಸಾಧನೆಯನ್ನು ದಕ್ಷಿಣ ರೈಲ್ವೆಯ ಮುಖ್ಯ ಅಥ್ಲೆಟಿಕ್ಸ್ ಕೋಚ್ ನಿಜಾಮುದ್ದೀನ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ಇಂದು ನಡೆಯಲಿರುವ ಮಹಿಳೆಯರ 4×400 ಮೀಟರ್ ರಿಲೇ ರೇಸ್‌ನಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆಲ್ಲುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿತ್ಯಾ ಈಗಾಗಲೇ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿದ್ದಾಳೆ, ಕೇವಲ ಚಿನ್ನದ ಪದಕವಷ್ಟೇ ಬಾಕಿ ಇದೆ. ಇಂದಿನ ರಿಲೇ ಪಂದ್ಯದಲ್ಲಿ ಅವಳು ಮತ್ತು ಭಾರತದ ತಂಡ ದೇಶಕ್ಕೆ ಬಂಗಾರದ ಪದಕ ತಂದುಕೊಡಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಕೋಚ್ ನಿಜಾಮುದ್ದೀನ್ ಸಂತಸ ಹಂಚಿಕೊಂಡಿದ್ದಾರೆ.

Must Read