September 29, 2026
Tuesday, September 29, 2026
spot_img

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್‌ ಪರ ಯತ್ನಾಳ್ ಬ್ಯಾಟಿಂಗ್: ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಹೊಸದಿಗಂತ ವರದಿ ವಿಜಯಪುರ:

ಭಾರತೀಯ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಓರ್ವ ದಕ್ಷ ಅಧಿಕಾರಿ, ಅವರು ಯಾವ ಪಕ್ಷದ ಏಜೆಂಟರೂ ಅಲ್ಲ, ಈ ದಲಿತ ಅಧಿಕಾರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನವೀನ್ ಚಾವ್ಲಾ ಎಂಬ ಮುಖ್ಯ ಚುನಾವಣಾ ಆಯುಕ್ತರಿದ್ದರು, ಸಭೆ ನಡೆದ ನಂತರ ಎಐಸಿಸಿ ಧುರೀಣೆ ಸೋನಿಯಾ ಗಾಂಧಿಗೆ ಕ್ಷಣಾರ್ಧದಲ್ಲಿಯೇ ಮಾಹಿತಿ ನೀಡುತ್ತಿದ್ದರು, ಆದರೆ ಸದ್ಯ ದಕ್ಷ ದಲಿತ ಅಧಿಕಾರಿಯ ವ್ಯಕ್ತಿತ್ವ ಹರಣಕ್ಕೆ ಕಾಂಗ್ರೆಸ್ ಮುಂದಾಗುತ್ತಿರುವುದು ಸರಿಯಲ್ಲ ಎಂದರು.

ಈ ಹಿಂದೆ ಚುನಾವಣಾ ಆಯೋಗವನ್ನು ಯಾವ ರೀತಿ ಕಾಂಗ್ರೆಸ್ ದುರಪಯೋಗಪಡಿಸಿಕೊಂಡಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಇನ್ನೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಘನತೆ ಬದಿಗೊತ್ತಿ ಚುನಾವಣಾ ಮುಖ್ಯ ಆಯುಕ್ತರ ಪ್ರತಿಕೃತಿ ದಹಿಸಿರುವುದು ಅವರಿಗೆ ಶೋಭೆ ತರುವ ಸಂಗತಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಸಂಪುಟದ ಸಚಿವರು ನಿತ್ಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಅವರ ಪ್ರತಿಕೃತಿ ದಹಿಸಿ ನೋಡೋಣ?, ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಅವಮಾನ, ರಾಜ್ಯದ ರೈತರಿಗೆ ಬರ ಪರಿಹಾರ ಘೋಷಣೆ ಮತ್ತಿತರ ವಿಷಯಗಳನ್ನಿಟ್ಟುಕೊಂಡು ಅ.6 ರಂದು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ:

ಎಂ.ಬಿ. ಪಾಟೀಲ ಕಷ್ಟದಲ್ಲಿ ಜೊತೆ ನಿಂತವನು ನಾನು, ನಿಮ್ಮ ಬಬಲೇಶ್ವರ ನೀವು ನೋಡಿಕೊಳ್ಳಿ ನಾನು ಸಚಿವ ಎಂ.ಬಿ. ಪಾಟೀಲರ ಹಂಗಿನಿಂದ ಶಾಸಕ ಆಗಿಲ್ಲ, ನೀವು ಹಿಂದೆ ಸೋತಾಗ ಎಷ್ಟು ತೊಂದರೆ ಅನುಭವಿಸಿದ್ದೀರಿ, ಬಿಎಲ್‌ಡಿಇ ವಿಷಯವಾಗಿ ನಿಮಗೆ ತೊಂದರೆಯಾದಾಗ ನಿಮ್ಮ ಕಷ್ಟದಲ್ಲಿ ಜೊತೆ ನಿಂತವನು ನಾನು. ಅಭಿವೃದ್ಧಿ ವಿಷಯದಲ್ಲಿ ನಿಮಗೆ ಸದಾ ಬೆಂಬಲವಾಗಿ ನಿಂತಿದ್ದೇನೆ, ನೀವು ಸದಾ ಟೆನ್‌ಷನ್‌ನಲ್ಲಿಯೇ ಇರುತ್ತೀರಿ ಎಂದರು.

ನೀವು ಬಬಲೇಶ್ವರ ಛಲೋ ಇಟ್ಟುಕೊಳ್ಳಿ, ಅದು ಹೊಲಸು ನಾರುತ್ತಿದೆ, ಸಾಕು ಸಾಕಾಗಿದೆ ಎಂದು ಜನರು ಹೇಳುತ್ತಿದ್ದಾರೆ, ಸಚಿವ ಎಂಬಿಪಿ ಮನೆ ತುಂಬಾ ಸಾಬರೇ ಸೇರಿರುತ್ತಾರೆ ನಮಗಂತೂ ಸಾಕಾಗಿದೆ ಎಂದು ಅನೇಕರು ಸಚಿವ ಎಂಬಿಪಿ ವಿರುದ್ಧ ಅನೇಕ ಹಿಂದೂ ಮುಖಂಡರು ಅಸಮಾಧಾನವನ್ನು ನನ್ನ ಮುಂದೆ ಹಾಕಿದ್ದಾರೆ, ಹೀಗಾಗಿ ನೀವು ನಿಮ್ಮದು ನೋಡಿಕೊಳ್ಳಿ, ನನಗೆ ಛಾಲೆಂಜ್ ಮಾಡಿಕೊಳ್ಳಲು ಬರಬೇಡಿ ಎಂದರು.

ನಾನು ಬ್ಲಾಕ್ ಮೇಲ್ ಮಾಡುವ ರಾಜಕಾರಣಿಯಲ್ಲ, ಬ್ಲಾಕ್ ಮೇಲ್ ಮಾಡಿದ್ದರೆ ನಾನು ಇಂದು ಮುಖ್ಯಮಂತ್ರಿಯೇ ಆಗಿರುತ್ತಿದ್ದೆ, ಹಿಂದೂಗಳ ವೋಟು ಒಡೆಯಬಾರದು ಎಂದು ಒಂದೇ ಕಾರಣಕ್ಕೆ ನಾನು ಪಕ್ಷ ಸ್ಥಾಪನೆ ಮಾಡುತ್ತಿಲ್ಲ, ಕೊನೆ ಕ್ಷಣದವರೆಗೆ ಕಾಯುತ್ತಿರುವೆ ಎಂದರು.

ಸಚಿವ ಎಂ.ಬಿ. ಪಾಟೀಲರ ರೈಟ್ ಹ್ಯಾಂಡ್‌ಗಳಿಂದಲೇ ಭೂ ಕಬಳಿಕೆ ನಡೆಯುತ್ತಿದೆ, ರುದ್ರಗೌಡರಂತಹ ಅನೇಕರ ಜಮೀನುಗಳನ್ನು ಸಚಿವ ಎಂಬಿಪಿ ಅವರ ಹಿಂಬಾಲಕರೇ ಎತ್ತಿ ಹಾಕಿದ್ದಾರೆ, ಈ ರೀತಿಯ ಭೂ ಕಬಳಿಕೆ ಪ್ರಕರಣ ಅಂದಿನ ಜಿಲ್ಲಾ ಪೊಲೀಸ್ ಅಧೀಕ್ಷಕರ ಗಮನಕ್ಕೆ ಬಂದಿತ್ತು. ಹೀಗಾಗಿ ಅವರ ತನಿಖೆಯನ್ನು ಚುರುಕುಗೊಳಿಸಿದಾಗ ಅಂತಹ ನಿಷ್ಠಾವಂತ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಯಿತು. ಭೂಕಬಳಿಕೆ ಮಾಡಿರುವ ಎಲ್ಲ ದಾಖಲೆಯೂ ನನ್ನ ಬಳಿ ಇವೆ, ಬೇಕಾದರೆ ಪತ್ರಿಕಾಗೋಷ್ಠಿ ನಡೆಸಿ ಈ ದಾಖಲೆ ಬಿಡುಗಡೆ ಮಾಡಲೇ ಎಂದು ಯತ್ನಾಳ್ ಸವಾಲು ಹಾಕಿದರು.

Must Read