September 29, 2026
Tuesday, September 29, 2026
spot_img

ನಿಯಮ ಉಲ್ಲಂಘನೆ ಆರೋಪ; ಮುಂಬೈನ 122 ವರ್ಷ ಹಳೆಯ ‘Kyani & Co.’ ಬೇಕರಿ ಲೈಸೆನ್ಸ್ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬೈನ ಶತಮಾನಕ್ಕೂ ಹಳೆಯದಾದ ಐತಿಹಾಸಿಕ ‘ಕ್ಯಾನಿ ಆ್ಯಂಡ್ ಕೋ’ (Kyani & Co.) ಕೆಫೆಯ ಆಹಾರ ಪರವಾನಗಿಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.

ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಇಲಾಖೆಯ ಕಮಿಷನರ್ ತುಕರಾಮ್ ಮುಂಢೆ ಅವರ ನೇತೃತ್ವದಲ್ಲಿ ನಡೆದ ದಿಢೀರ್ ದಾಳಿಯ ವೇಳೆ ಕೆಫೆಯ ಅಡುಗೆ ಮನೆಯಲ್ಲಿ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಮಾರಕವಾಗಬಲ್ಲ ಭೀಕರ ನೈರ್ಮಲ್ಯ ಲೋಪಗಳು ಪತ್ತೆಯಾಗಿವೆ.

ಮುಂಬೈಗೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯರ ನೆಚ್ಚಿನ ತಾಣವಾಗಿದ್ದ ಈ ಕೆಫೆಯಲ್ಲಿ ಸದ್ಯಕ್ಕೆ ಆಹಾರ ಪದಾರ್ಥಗಳ ಸಂಗ್ರಹಣೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅಡುಗೆ ಮನೆಯಲ್ಲಿ ಭೀಕರ ದೃಶ್ಯ

ಗ್ರಾಹಕರಿಗೆ ರುಚಿಕರ ಬನ್ ಮಸ್ಕಾ ಮತ್ತು ಮವಾ ಕೇಕ್ ನೀಡುತ್ತಿದ್ದ ಈ ಕೆಫೆಯ ಕಿಚನ್‌ ಒಳಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಣ್ಣಿಗೆ ಬಿದ್ದ ದೃಶ್ಯಗಳು ನಿಜಕ್ಕೂ ಅಸಹ್ಯ ಹುಟ್ಟಿಸುವಂತಿದ್ದವು. ಆಹಾರ ತಯಾರಿಸುವ ಮತ್ತು ಇಡುವ ಜಾಗದಲ್ಲಿ ಸತ್ತ ಜಿರಳೆಗಳು, ಇಲಿ ಪಿಕ್ಕೆಗಳು ಹಾಗೂ ನೊಣಗಳು ಮುತ್ತಿಕೊಂಡಿದ್ದವು. ಜೊತೆಗೆ ಕೆಫೆಯೊಳಗೆ ಬೆಕ್ಕುಗಳು ಓಡಾಡುತ್ತಿದ್ದವು. ಇದರೆ ಜೊತೆಗೆ ಕಚ್ಚಾ ಆಹಾರ ಪದಾರ್ಥಗಳನ್ನು ಇಟ್ಟಿದ್ದ ರೆಫ್ರಿಜರೇಟರ್ ಒಳಗೆ ರಕ್ತದ ಕಲೆ ಪತ್ತೆಯಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಆಹಾರ ಸಂಸ್ಕರಣೆ ಮಾಡುವ ಪ್ರಮುಖ ಜಾಗದಲ್ಲೇ ಒಳಚರಂಡಿಯ ತೆರೆದ ಮ್ಯಾನ್‌ಹೋಲ್ತೆರೆದುಕೊಂಡಿತ್ತು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿಯಾಗಿದ್ದರಿಂದ ಕೆಫೆಯನ್ನು ತಕ್ಷಣವೇ ಬಂದ್ ಮಾಡಲು ಆದೇಶಿಸಲಾಯಿತು.

30 ಹೋಟೆಲ್‌ಗಳ ಲೈಸೆನ್ಸ್ ರದ್ದು

ಹಬ್ಬಗಳ ಸಂದರ್ಭದಲ್ಲಿ ಹೋಟೆಲ್‌ಗಳಲ್ಲಿ ನಡೆಯುವ ಆಹಾರ ಕಲಬೆರಕೆ ಹಾಗೂ ನೈರ್ಮಲ್ಯ ಲೋಪ ತಡೆಯಲು ಮಹಾರಾಷ್ಟ್ರ ಎಫ್‌ಡಿಎ ಕಳೆದ 5 ದಿನಗಳಿಂದ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯ ಭಾಗವಾಗಿ ರಾಜ್ಯಾದ್ಯಂತ ನಿಯಮ ಉಲ್ಲಂಘಿಸಿದ ಒಟ್ಟು 30 ಹೋಟೆಲ್‌ಗಳ ಲೈಸೆನ್ಸ್ ಅಮಾನತು ಮಾಡಲಾಗಿದೆ. ಇದರಲ್ಲಿ ಮುಂಬೈನ ಪ್ರಸಿದ್ಧ ‘ಸಬ್‌ವೇ’ ಔಟ್‌ಲೆಟ್, ‘ರಾಯಲ್ ಚೀನಾ’, ‘ಒಲಂಪಿಯಾ ಕಾಫಿ ಹೌಸ್’ ಹಾಗೂ ವಿಲೇ ಪಾರ್ಲರ್‌ನ ‘ಡ್ಯಾಫೋಡಿಲ್ಸ್ ಫಾಸ್ಟ್ ಫುಡ್’ ಕೂಡ ಸೇರಿವೆ.

ಇದನ್ನೂ ಓದಿ:

ರಾಜ್ಯಾದ್ಯಂತ ನಡೆಸಿದ ದಾಳಿಯಲ್ಲಿ ಸುಮಾರು 50.6 ಟನ್ ಸಂಶಯಾಸ್ಪದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರಲ್ಲಿ ಹಬ್ಬದ ಸ್ವೀಟ್ಸ್ ತಯಾರಿಸಲು ಬಳಸುವ ಖೋವಾ, ಬೆಣ್ಣೆ, ಖಾದ್ಯ ತೈಲ ಮತ್ತು ಸಾಂಬಾರು ಪದಾರ್ಥಗಳು ಸೇರಿವೆ.

Must Read