ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ಮ್ಯಾನ್ಮಾರ್ ಗಡಿಯ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ಗಸ್ತು ತಂಡದ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ.
ನಂಪಾಂಗ್ ವೃತ್ತ ವ್ಯಾಪ್ತಿಯ ನಂಪಾಂಗ್ ನಾಲಾ ಸಮೀಪ ಘಟನೆ ನಡೆದಿಡಿದ್ದು, ದಾಳಿಯ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿವೆ.
ಗಸ್ತು ನಡೆಸುತ್ತಿದ್ದ ವೇಳೆ ದಾಳಿ
ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ 21ನೇ ಅಸ್ಸಾಂ ರೈಫಲ್ಸ್ ಸಿಬ್ಬಂದಿ ನಿಯಮಿತ ಗಸ್ತು ನಡೆಸುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ದಾಳಿಯಲ್ಲಿ 42 ವರ್ಷದ ಯೋಧ ಹವಿಲ್ದಾರ್ ಜಂಖೋಖೈ ಕುಕಿ ಮೃತಪಟ್ಟಿದ್ದಾರೆ. ಗಾಯಗೊಂಡ ನಾಲ್ವರು ಸಿಬ್ಬಂದಿಯನ್ನು ವೈದ್ಯಕೀಯ ನೆರವಿಗಾಗಿ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಕುರಿತು ತಕ್ಷಣದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಬಳಿಕ ಗಡಿ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಉಗ್ರರ ಕೈವಾಡವಿರುವ ಶಂಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ನಿಷೇಧಿತ ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್–ಖಾಪ್ಲಾಂಗ್ (ಯುಂಗ್ ಆಂಗ್) ಅಥವಾ NSCN (K-YA) ಸಂಘಟನೆಗೆ ಸೇರಿದ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಆದರೆ ದಾಳಿಕೋರರ ಗುರುತಿನ ಬಗ್ಗೆ ಇದುವರೆಗೆ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ. ಹೀಗಾಗಿ ತನಿಖೆ ಪೂರ್ಣಗೊಳ್ಳುವವರೆಗೆ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗೆ ನೇರವಾಗಿ ಆರೋಪಿಸಲಾಗಿಲ್ಲ.
ಗಡಿ ಭದ್ರತೆ ಬಲಪಡಿಸುವ ಕಾರ್ಯದ ನಡುವೆ ನಡೆದಿರುವ ಈ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದು, ದಾಳಿಯ ಹಿಂದಿರುವವರನ್ನು ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ.



