ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ಜಿದ್ದಾಜಿದ್ದಿ ಇದೀಗ ಮತ್ತಷ್ಟು ತಾರಕಕ್ಕೇರಿದೆ. ನೈಸ್ ಯೋಜನೆಯ ಅಕ್ರಮಗಳ ಕುರಿತು ಇಂದು ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರದ್ದೆನ್ನಲಾದ ಆಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಅಶೋಕ್ ಖೇಣಿ ಆಡಿಯೋದಲ್ಲಿ ಏನಿದೆ?
ಹೆಚ್‌ಡಿಕೆ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರು ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ. ʼಈ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿ ಸಂಪೂರ್ಣವಾಗಿ ಖಾಲಿಯಾಗಿದೆ. ಇನ್ನು ನನಗೆ ಎಲ್ಲಿಂದ ಹಣ ಕೊಡುತ್ತಾರೆ? ಒಂದು ವೇಳೆ ಈ ಸಮಸ್ಯೆ ನ್ಯಾಯಾಲಯಕ್ಕೆ ಹೋದರೆ, ನನಗೆ ಬರಬೇಕಾದ 2 ಲಕ್ಷ ಕೋಟಿ ರೂ. ಬದಲಿಗೆ ಅವರು ಇಡೀ ವಿಧಾನಸೌಧವನ್ನೇ ನನಗೆ ಬರೆದುಕೊಡಬೇಕಾಗುತ್ತದೆʼ ಎಂದು ಖೇಣಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ.
ಫ್ರೇಮ್ ವರ್ಕ್ ಅಗ್ರಿಮೆಂಟ್ ಬದಲಿಸಿದ ಡಿಕೆಶಿ
ನೈಸ್ ಯೋಜನೆಯ ಮೂಲ ಒಪ್ಪಂದವನ್ನು ತಮಗೆ ಬೇಕಾದಂತೆ ಬದಲಾಯಿಸಲಾಗಿದೆ ಎಂದು ಆರೋಪಿಸಿದ ಹೆಚ್‌ಡಿಕೆ, ʼಜುಲೈ 29, 2026 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲೂ ಈ ಅಕ್ರಮದ ಉಲ್ಲೇಖವಿದೆ. ತಂದೆಯ ಬಟ್ಟೆಯನ್ನು ಮಗನಿಗೆ ಸರಿಹೊಂದುವಂತೆ ಟೇಲರ್ ಕತ್ತರಿಸಿ ಹೊಲಿಯುವ ಹಾಗೆ, ಇಡೀ ಒಪ್ಪಂದವನ್ನೇ ತಮಗೆ ಅನುಕೂಲವಾಗುವಂತೆ ಬದಲಾಯಿಸಿದ ಟೇಲರ್ ಈ ಡಿ.ಕೆ. ಶಿವಕುಮಾರ್. 2003ರಲ್ಲಿ ಕೇವಲ 4 ಕೋಟಿ ರೂ. ಇದ್ದ ಇವರ ಆಸ್ತಿ ಈಗ 1,413 ಕೋಟಿ ರೂ.ಗೆ ಜಿಗಿದಿದೆ. ಇದು ಇವರು ಮಾಡಿರುವ ಸಾಧನೆʼ ಎಂದು ಕಿಡಿಕಾರಿದರು.
ʼಹೌದು ನಾನು ಬ್ಲ್ಯಾಕ್‌ಮೇಲ್ ಮಾಡ್ತಿರೋದು ನಿಜʼ
ಕುಮಾರಸ್ವಾಮಿ ಅವರು ತಮ್ಮ ಸ್ವಂತ ಜಮೀನು ಉಳಿಸಿಕೊಳ್ಳಲು ಬ್ಲ್ಯಾಕ್‌ಮೇಲ್ ತಂತ್ರ ಬಳಸುತ್ತಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋವನ್ನು ಹೆಚ್‌ಡಿಕೆ ಬಿಡುಗಡೆ ಮಾಡಿದರು. ಇದಕ್ಕೆ ನೇರವಾಗಿಯೇ ತಿರುಗೇಟು ನೀಡಿದ ಕುಮಾರಸ್ವಾಮಿ, ʼಶಿವಕುಮಾರ್ ಅವರೇ, ನಾನು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ನಿಜ. ಆದರೆ ಯಾರನ್ನು ಉಳಿಸಲು ಗೊತ್ತೇ? 1997-98ರಲ್ಲೇ ಕೆಐಎಡಿಬಿ ನೋಟಿಫೈ ಮಾಡಿದ, ಸರ್ಕಾರದ ಆಸ್ತಿಯಾಗಿದ್ದ ಜಾಗದಲ್ಲಿ ನಿಮ್ಮ ತಮ್ಮ ಡಿ.ಕೆ. ಸುರೇಶ್ 2003ರಲ್ಲಿ 10 ಎಕರೆ ಜಾಗ ಖರೀದಿ ಮಾಡಿದ್ದಾರೆ. ನಿಮ್ಮ ತಮ್ಮ, ನಿಮ್ಮ ತಾಯಿ, ನಿಮ್ಮ ಕುಟುಂಬಸ್ಥರಿಂದ ಜಮೀನನ್ನು ಉಳಿಸಲು ನಾನು ಅಶೋಕ್ ಖೇಣಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದೇನೆʼ ಎಂದು ಗುಡುಗಿದರು.
ಇದನ್ನೂ ಓದಿ:
300 ಎಕರೆ ಭೂಮಿ ಲೂಟಿ ಆರೋಪ
ಶೋಭಾ ಡೆವಲಪರ್ಸ್ ಜೊತೆ ನಡೆದಿರುವ ಒಳಒಪ್ಪಂದವನ್ನು ಬಹಿರಂಗಪಡಿಸಿದ ಹೆಚ್‌ಡಿಕೆ, ʼಇವರು ಯಾರ ಯಾರ ಹೆಸರಿಗೋ ಬರೆಸಿಕೊಂಡು ಬರೋಬ್ಬರಿ 300 ಎಕರೆ ಗೋಮಾಳದ ಭೂಮಿಯನ್ನು ನುಂಗಿ ಹಾಕಿದ್ದಾರೆ. ಕೆಐಎಡಿಬಿ ವಶಪಡಿಸಿಕೊಂಡಿದ್ದ ಭೂಮಿಯನ್ನು ಇವರು ಅಕ್ರಮವಾಗಿ ದಕ್ಕಿಸಿಕೊಂಡಿದ್ದಾರೆ. ಭೂಮಿ ಪರಿವರ್ತನೆಗಾಗಿ ಡಿ.ಕೆ. ಸುರೇಶ್ ಅರ್ಜಿ ಸಲ್ಲಿಸಿದರೆ, ಅದರ ಅಧಿಕೃತ ಪ್ರತಿಯನ್ನು ಡಿ.ಕೆ. ಶಿವಕುಮಾರ್ ಹೆಸರಿಗೆ ನೀಡಲಾಗುತ್ತದೆ. ಬಳಿಕ 2011ರಲ್ಲಿ ಶೋಭಾ ಡೆವಲಪರ್ಸ್ ಜೊತೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಪೂರಕವಾಗಿ 2015ರಲ್ಲಿ ನೈಸ್ ಸಂಸ್ಥೆಯು ಶೋಭಾ ಡೆವಲಪರ್ಸ್‌ಗೆ 10 ಎಕರೆ ಜಾಗಕ್ಕೆ ಯಾವುದೇ ಆಕ್ಷೇಪಣೆ ಇಲ್ಲದ ಎನ್‌ಒಸಿ ನೀಡಿದೆ. ಸುರೇಶ್ ಮತ್ತು ಗೌರಮ್ಮ ಹೆಸರಿನಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರ ಎಸಗಲಾಗಿದೆʼ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.



