September 29, 2026
Tuesday, September 29, 2026
spot_img

ಕಾದಾಟದ ಗಾಯ, ಮುರಿದ ದಂತದೊಂದಿಗೆ ಬಂದಿದ್ದ ಆನೆ ದುಬಾರೆಯಲ್ಲಿ ಸಾ*ವು

ಹೊಸದಿಗಂತ ವರದಿ ಮಡಿಕೇರಿ:

ಕಾದಾಟದ ಗಾಯ ಹಾಗೂ ಮುರಿದ ದಂತದೊಂದಿಗೆ ಬಂದಿದ್ದ 19 ವರ್ಷದ ಆನೆಯೊಂದು ದುಬಾರೆ ಆನೆ ಶಿಬಿರದಲ್ಲಿ ಮಂಗಳವಾರ ಮೃತಪಟ್ಟಿದೆ.

ಕಾದಾಟದ ಗಾಯಗಳು ಹಾಗೂ ಮುರಿದ ದಂತದೊಂದಿಗೆ 19 ವರ್ಷ ಪ್ರಾಯದ ಗಂಡಾನೆಯೊಂದನ್ನು ಕಳೆದ ಏಪ್ರಿಲ್ ತಿಂಗಳಲ್ಲಿ‌ ದುಬಾರೆ ಆನೆ ಶಿಬಿರಕ್ಕೆ ಕರೆತರಲಾಗಿತ್ತು. 

ಅರಣ್ಯ ಇಲಾಖೆಯ ಪಶುವೈದ್ಯರು ಆನೆಯನ್ನು ಪ್ರತ್ಯೇಕವಾಗಿಟ್ಟು (ಕ್ವಾರಂಟೈನ್), ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಎಚ್ಚರವಹಿಸಿ, ಪ್ರತಿದಿನ ಆ್ಯಂಟಿಬಯೋಟಿಕ್ಸ್, ನೋವು ನಿವಾರಕಗಳು, ಗಾಯಕ್ಕೆ ಔಷಧೋಪಚಾರ ಮತ್ತು ಪೋಷಕಾಂಶಗಳನ್ನು ನಿರಂತರವಾಗಿ ನೀಡುತ್ತಿದ್ದರು.

ಹೆಚ್ಚಿನ ತಜ್ಞ ಚಿಕಿತ್ಸೆಗಾಗಿ, ‘ವೈಲ್ಡ್‌ಲೈಫ್ ಎಸ್.ಒ.ಎಸ್’ (Wildlife SOS) ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನು ಕರೆಸಿ ಜಂಟಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಡಿಜಿಟಲ್ ಎಕ್ಸ್-ರೇ ಪರೀಕ್ಷೆಯ ವೇಳೆ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ದೃಢಪಟ್ಟಿತ್ತು.

ಇದನ್ನೂ ಓದಿ:

ತಜ್ಞ ವೈದ್ಯರ ಸಲಹೆಯಂತೆ ಎಲ್ಲಾ ಸುಧಾರಿತ ಚಿಕಿತ್ಸೆಗಳನ್ನು ಮುಂದುವರಿಸಲಾಗಿತ್ತು ಹಾಗೂ ಕಾಲಿನ ಮೇಲಿನ ಒತ್ತಡ ತಗ್ಗಿಸಲು ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಅಲ್ಲದೆ, ಪೆಟ್ಟಾದ ಕಾಲನ್ನು ಸ್ಥಿರವಾಗಿಡಲು ಸೆ. 27ರಂದು ನುರಿತ ತಜ್ಞರ ಮೂಲಕ ಫೈಬರ್‌ಗ್ಲಾಸ್ ಬ್ಯಾಂಡೇಜ್ ಹಾಕಲಾಗಿತ್ತು.

ಅರಣ್ಯ ಇಲಾಖೆಯ ಸತತ ಐದು ತಿಂಗಳಿಗೂ ಹೆಚ್ಚಿನ ನಿರಂತರ ಚಿಕಿತ್ಸೆಯ ನಡುವೆಯೂ ಮಂಗಳವಾರ ಮುಂಜಾನೆ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣವೇ ತುರ್ತು ಗ್ಲುಕೋಸ್/ದ್ರವ ಚಿಕಿತ್ಸೆ ಹಾಗೂ ತೀವ್ರ ನಿಗಾ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದೆ.

ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ನಡೆಸಲಾಗಿದ್ದು, ದೀರ್ಘಕಾಲದ ಮೂಳೆ ಮುರಿತದ ತೊಂದರೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ ಆನೆಯು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿಗಳಿಂದ ತಿಳಿದುಬಂದಿದೆ ಎಂದು ಮಡಿಕೇರಿ ವಿಭಾಗದ ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

Must Read