September 29, 2026
Tuesday, September 29, 2026
spot_img

ಬಸವನಬಾಗೇವಾಡಿಯಲ್ಲಿ ಮತ್ತೆ ಕಂಪಿಸಿದ ಭೂಮಿ: 3.5 ತೀವ್ರತೆಯ ಕಂಪನ, ಜನರಲ್ಲಿ ಆತಂಕ

ಹೊಸದಿಗಂತ ವರದಿ ಬಸವನಬಾಗೇವಾಡಿ:

ಬಸವನಬಾಗೇವಾಡಿ ತಾಲ್ಲೂಕಿನ ದಿಂಡಿವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಸುಮಾರು 1.1ಕಿ.ಮೀ ನೈಋತ್ಯ ದಿಕ್ಕಿನಲ್ಲಿ, 10 ಕಿ.ಮೀ ಆಳದಲ್ಲಿ ಸೋಮವಾರ ಮಧ್ಯರಾತ್ರಿ 12.25ರ ಸುಮಾರಿಗೆ ಲಘು ಭೂಕಂಪನ ಸಂಭವಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿಯಂತೆ ಭೂಕಂಪನವು 3.5 ತೀವ್ರತೆ ದಾಖಲಾಗಿದೆ.

ಬಸವನಬಾಗೇವಾಡಿ ಹಾಗೂ ಸುತ್ತಮುತ್ತಲಿನ ಸುಮಾರು 40–50 ಕಿ.ಮೀ ವ್ಯಾಪ್ತಿಯ ಜನರಿಗೆ ಭೂಕಂಪನದ ಅನುಭವವಾಗಿದೆ. ಗಾಢ ನಿದ್ರೆಯಲ್ಲಿದ್ದ ಕೆಲವರು ಭೂಮಿ ಕಂಪಿಸಿದ ಅನುಭವದಿಂದ ಗಾಬರಿಗೊಂಡು ಕೊಡೇಕಲ್ ದೇವಸ್ಥಾನ ಹತ್ತಿರವಿರುವ ಮನೆಗಳಿಂದ ಹೊರಗೆ ಬಂದಿದ್ದಾರೆ ಎಂದು ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ತಿಳಿಸಿದ್ದಾರೆ. ಲಘು ಭೂಕಂಪನವಾಗಿದ್ದರಿಂದ ಯಾವುದೇ ಹಾನಿ ಅಥವಾ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇದೇ ತಿಂಗಳ ಸೆ.17ರಂದು ನಸುಕಿನ 5.30ರ ಸುಮಾರಿಗೆ ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪ 3.7 ತೀವ್ರತೆಯ ಲಘು ಭೂಕಂಪನ ಸಂಭವಿಸಿತ್ತು. ಇದೀಗ ದಿಂಡವಾರ ಬಳಿ ಭೂಕಂಪನ ಸಂಭವಿಸಿರುವುದು ಈ ತಿಂಗಳಲ್ಲಿ ತಾಲ್ಲೂಕಿನಲ್ಲಿ ದಾಖಲಾಗಿರುವ ಎರಡನೇ ಭೂಕಂಪನವಾಗಿದೆ.

Must Read