September 30, 2026
Wednesday, September 30, 2026
spot_img

ಸರ್ವರ್ ಇಶ್ಯೂ ನೆಪ, ಶ್ರಮಜೀವಿಗೆ ವಂಚನೆ: ಮಹಿಳೆಯಾದರೆ ಕ್ಷಮೆ, ಪುರುಷನಾದರೆ ಶಿಕ್ಷೆಯೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ದಟ್ಟಣೆಯಲ್ಲಿ ಹಗಲು-ರಾತ್ರಿ ಎನ್ನದೆ ಆಟೋ, ಬೈಕ್ ಟ್ಯಾಕ್ಸಿ ಓಡಿಸಿ ಜೀವನ ಸಾಗಿಸುವ ಚಾಲಕನಿಗೆ ಒಂದು ದಿನದ ಸಂಪಾದನೆಯ ಪ್ರತಿಯೊಂದು ರೂಪಾಯಿಯೂ ಪ್ರಮುಖ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ಪಾವತಿ ವ್ಯವಸ್ಥೆ ಜೀವನವನ್ನು ಸುಲಭಗೊಳಿಸಿದೆ ನಿಜ. ಆದರೆ, ಅದೇ ತಂತ್ರಜ್ಞಾನದ ನೆಪವನ್ನಿಟ್ಟುಕೊಂಡು ದುಡಿಯುವ ವರ್ಗಕ್ಕೆ ವಂಚಿಸುವ ಘಟನೆಗಳು ಪ್ರತಿದಿನ ನಡೆಯುತ್ತಲೇ ಇವೆ.

ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ, ರಾಪಿಡೋ ಸವಾರರೊಬ್ಬರು ಮಹಿಳಾ ಪ್ರಯಾಣಿಕಳನ್ನು ಆಕೆ ತಲುಪಬೇಕಾದ ಸ್ಥಳಕ್ಕೆ ತಲುಪಿಸುತ್ತಾರೆ. ಪ್ರಯಾಣ ಮುಗಿದ ನಂತರ ಆನ್‌ಲೈನ್‌ನಲ್ಲಿ ಹಣ ಪಾವತಿಸಲು ಯತ್ನಿಸಿದಾಗ “ಸರ್ವರ್ ಸಮಸ್ಯೆ” ಎಂದು ಮೆಸೇಜ್ ಬರುತ್ತದೆ. ತಕ್ಷಣ ಆ ಮಹಿಳೆ ಸರ್ವರ್ ಸಮಸ್ಯೆಯಾಗಿದೆ ಎಂದು ಹೇಳಿ, ಅಲ್ಲಿಂದ ಮುಖ ತಿರುಗಿಸಿ ಸುಮ್ಮನೆ ಹೊರಟುಹೋಗುತ್ತಾಳೆ. ಪಾಪ, ಆ ಬೈಕ್ ಚಾಲಕ ಆಕೆಯ ಖಾತೆಯಿಂದ ಹಣ ಜಮೆಯಾಗಬಹುದು ಎಂಬ ಆಸೆಯಿಂದ ಕಾಯುತ್ತಾ ಅಲ್ಲೇ ನಿಲ್ಲುತ್ತಾನೆ. ಆದರೆ ಎಷ್ಟು ಸಮಯ ಕಾದರೂ ಹಣ ಬರುವುದೇ ಇಲ್ಲ. ತನ್ನ ಶ್ರಮದ ಹಣ ಸಿಗದೆ, ಏನು ಮಾಡಲೂ ತೋಚದೆ ಆತ ಮೌನವಾಗಿ ನಷ್ಟವನ್ನು ಸಹಿಸಿಕೊಂಡು ಹೊರಟುಹೋಗುತ್ತಾನೆ.

ಒಂದು ವೇಳೆ ಪಾತ್ರಗಳು ಉಲ್ಟಾ ಆಗಿದ್ದರೆ?

ಇಲ್ಲಿ ಪ್ರಮುಖವಾಗಿ ಏಳುವ ಪ್ರಶ್ನೆ ಎಂದರೆ ಇದೇ ಘಟನೆ ಉಲ್ಟಾ ಆಗಿದ್ದರೆ ಸಮಾಜ ಹೇಗೆ ಪ್ರತಿಕ್ರಿಯಿಸುತ್ತಿತ್ತು? ಒಬ್ಬ ಪುರುಷ ಪ್ರಯಾಣಿಕ, ಮಹಿಳಾ ಚಾಲಕಿಗೆ ಇದೇ ರೀತಿ “ಸರ್ವರ್ ಪ್ರಾಬ್ಲಮ್” ಎಂದು ಹೇಳಿ ಹಣ ಕೊಡದೆ ಹೊರಟುಹೋಗಿದ್ದರೆ ಏನಾಗುತ್ತಿತ್ತು?

ತಕ್ಷಣವೇ ಆ ಘಟನೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿತ್ತು. “ಮಹಿಳಾ ಚಾಲಕಿಗೆ ಕಿರುಕುಳ” ಎಂಬ ಕ್ಯಾಪ್ಶನ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳು ವೈರಲ್ ಆಗುತ್ತಿದ್ದವು. ಆ ಪುರುಷನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುತ್ತಿತ್ತು ಮತ್ತು ಮಾಧ್ಯಮಗಳಲ್ಲಿ ಹೆಡ್ಲೈನ್ ಆಗಿ ಪ್ರಸಾರವಾಗುತ್ತಿತ್ತು.

ಚಾಲಕನ ಭಯವೇನು?

ಆದರೆ, ಇಲ್ಲಿ ಸಂತ್ರಸ್ತನು ಒಬ್ಬ ಪುರುಷ ಚಾಲಕ ಮತ್ತು ವಂಚಿಸಿದವಳು ಒಬ್ಬ ಮಹಿಳೆ ಎಂಬ ಒಂದೇ ಕಾರಣಕ್ಕೆ ಇಡೀ ಸಮಾಜ ಮೌನ ವಹಿಸುತ್ತದೆ. ಆ ಪುರುಷ ಚಾಲಕನಿಗೆ ತನ್ನ ಹಣ ಕೇಳುವ ಧೈರ್ಯವೂ ಇರುವುದಿಲ್ಲ. ಏಕೆಂದರೆ, ಆತ ಆಕೆಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದರೆ ಅಥವಾ ಒಂದೇ ಒಂದು ಮಾತು ತಪ್ಪಾಗಿ ಆಡಿದರೆ, ಪರಿಸ್ಥಿತಿಯೇ ಆತನ ವಿರುದ್ಧ ತಿರುಗಬಹುದು, ಉಲ್ಟಾ ಆತನ ಮೇಲೆಯೇ ಕಿರುಕುಳದ ಆರೋಪ ಹೊರಿಸುವ ಸಾಧ್ಯತೆಗಳಿರುತ್ತವೆ ಎಂಬ ಭಯ ಆತನನ್ನು ಆವರಿಸಿರುತ್ತದೆ.

ಚಾಲಕರ ರಕ್ಷಣೆ ಹೇಗೆ?

ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆನ್ಲೈನ್ ಕಂಪನಿಗಳು ಕೇವಲ ಕಮಿಷನ್ ಪಡೆಯುವುದಕ್ಕೆ ಸೀಮಿತವಾಗದೆ, ಇಂತಹ ತಾಂತ್ರಿಕ ವಂಚನೆಗಳು ನಡೆದಾಗ ಚಾಲಕರ ನೆರವಿಗೆ ಬರಬೇಕಿದೆ. ಪಾವತಿ ವಿಫಲವಾದರೆ ಅದನ್ನು ಕಂಪನಿಯೇ ಭರಿಸಿ, ನಂತರ ಪ್ರಯಾಣಿಕರಿಂದ ವಸೂಲಿ ಮಾಡುವ ಸ್ಪಷ್ಟ ವ್ಯವಸ್ಥೆ ಜಾರಿಯಾಗಬೇಕಿದೆ.

ತಪ್ಪಿತಸ್ಥರು ಯಾರೇ ಆಗಿರಲಿ ಹೆಣ್ಣಾಗಿರಲಿ ಅಥವಾ ಗಂಡಾಗಿರಲಿ ಅಪರಾಧ ಅಪರಾಧವೇ. ಕಾಯಕ ನಂಬಿ ದುಡಿಯುವ ಶ್ರಮಿಕನ ಹೊಟ್ಟೆಗೆ ಹೊಡೆಯುವ ಇಂತಹ ಪ್ರವೃತ್ತಿ ಕೊನೆಗೊಳ್ಳಬೇಕು. ಪ್ರತಿಯೊಬ್ಬ ಚಾಲಕನೂ ಗೌರವ ಮತ್ತು ರಕ್ಷಣೆಗೆ ಅರ್ಹ.

Must Read