ಹೊಸದಿಗಂತ ವರದಿ ಬೆಳಗಾವಿ:
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯುವ ಸಭಾಂಗಣದಲ್ಲೇ ಮೈಕ್, ಎಸಿ ಹಾಗೂ ಫ್ಯಾನ್ಗಳು ಕೈಕೊಟ್ಟ ಪರಿಣಾಮ ಬುಧವಾರ ನಡೆದ ಸಭೆಯಲ್ಲಿ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಪರದಾಡುವಂತಾಯಿತು.
ಮೇಯರ್ ಪ್ರೀತಿ ಕಾಮಕರ ಅವರ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆಯೇ ಮೈಕ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಸದಸ್ಯರು ಮಾತನಾಡುವ ವೇಳೆ ಧ್ವನಿ ಸ್ಪಷ್ಟವಾಗಿ ಕೇಳಿಸದಿರುವುದು ಹಾಗೂ ಮೈಕ್ ಪದೇಪದೇ ಕಿರಿಕಿರಿ ಮಾಡಿದ್ದರಿಂದ ಸಭೆಯ ಕಲಾಪಕ್ಕೆ ಅಡಚಣೆ ಉಂಟಾಯಿತು.
ಮೈಕ್ ಸಮಸ್ಯೆಯಿಂದ ಅಸಮಾಧಾನಗೊಂಡ ಮೇಯರ್ ಪ್ರೀತಿ ಕಾಮಕರ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಸಾಮಾನ್ಯ ಸಭೆಯಲ್ಲಿಯೇ ಮೈಕ್ ದುರಸ್ತಿ ಮಾಡುವಂತೆ ಸೂಚಿಸಿದ್ದರೂ ಈವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಪಾಲಿಕೆ ಬಿಜೆಪಿ ಸದಸ್ಯ ರವಿ ದೋತ್ರೆ ಕೂಡ ಅಧಿಕಾರಿಗಳ ನಿರ್ವಹಣಾ ವೈಫಲ್ಯವನ್ನು ಪ್ರಶ್ನಿಸಿದರು. ಪಾಲಿಕೆಯ ನಿರ್ವಹಣೆ ಮಾಡುವವರು ಯಾರು? ಮೈಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಸಿಯೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾಮಾನ್ಯ ಸಭೆ ನಡೆಯುವ ಸಭಾಂಗಣದಲ್ಲೇ ಇಂತಹ ಸಮಸ್ಯೆ ಇದ್ದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ ಸಭಾಂಗಣದ ಎಸಿ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಉಷ್ಣತೆ ಹೆಚ್ಚಾಗಿ ಸದಸ್ಯರು ಹಾಗೂ ಅಧಿಕಾರಿಗಳು ತೊಂದರೆ ಅನುಭವಿಸಿದರು. ಕೆಲಕಾಲ ಕೂಲರ್ ಬಳಸಲಾಯಿತಾದರೂ ಅದನ್ನು ಚಾಲನೆ ಮಾಡಿದಾಗ ಮೈಕ್ನಲ್ಲಿ ಕಿರಿಕಿರಿ ಉಂಟಾದ ಹಿನ್ನೆಲೆಯಲ್ಲಿ ಕೂಲರ್ ಬಂದ್ ಮಾಡಿ ಫ್ಯಾನ್ಗಳನ್ನು ಬಳಸಬೇಕಾಯಿತು. ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ಮೂಲಭೂತ ಸೌಲಭ್ಯಗಳ ಕುರಿತು ಚರ್ಚಿಸಬೇಕಾದ ಸಾಮಾನ್ಯ ಸಭೆಯಲ್ಲಿ ಪಾಲಿಕೆಯ ಸ್ವಂತ ಸಭಾಂಗಣದಲ್ಲೇ ಮೂಲಸೌಕರ್ಯಗಳ ಕೊರತೆ ಕಂಡುಬಂದಿರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.
ಮೈಕ್, ಎಸಿ, ಫ್ಯಾನ್ ಸೇರಿದಂತೆ ಸಭಾಂಗಣದಲ್ಲಿರುವ ಎಲ್ಲ ಉಪಕರಣಗಳನ್ನು ಸಭೆಗೂ ಮುನ್ನವೇ ಪರಿಶೀಲಿಸಿ, ದೋಷಗಳನ್ನು ನಿವಾರಿಸುವಂತೆ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.



