ಹೊಸದಿಗಂತ ವರದಿ ಬಸವನಬಾಗೇವಾಡಿ:
ತಾಲ್ಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲೇ ಮೂರನೇ ಬಾರಿಗೆ ಲಘು ಭೂಕಂಪನ ಸಂಭವಿಸಿದ್ದು, ಪದೇಪದೇ ಭೂಮಿ ಕಂಪಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕವುಂಟು ಮಾಡಿದೆ.
ಬುಧವಾರ ನಸುಕಿನ ಜಾವ 2.04 ಘಂಟೆ ಸುಮಾರಿಗೆ ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಸುಮಾರು 3.9ಕಿ.ಮೀ ದೂರದ ಕೇಂದ್ರ ಬಿಂದುವಿನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್ಎನ್ಡಿಎಂಸಿ) ಮಾಹಿತಿಯಂತೆ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.
ಇದಕ್ಕೂ ಮೊದಲು ಸೋಮವಾರ ಮಧ್ಯರಾತ್ರಿ 12.26ರ ಸುಮಾರಿಗೆ ತಾಲ್ಲೂಕಿನ ದಿಂಡವಾರ ಗ್ರಾಮ ಪಂಚಾಯಿತಿ ಕಚೇರಿಯಿಂದ ಸುಮಾರು 1.1 ಕಿ.ಮೀ ನೈಋತ್ಯ ದಿಕ್ಕಿನಲ್ಲಿ, 10 ಕಿ.ಮೀ ಆಳದಲ್ಲಿ ಲಘು ಭೂಕಂಪನ ಸಂಭವಿಸಿತ್ತು. ಈ ಭೂಕಂಪನವೂ 3.5 ತೀವ್ರತೆ ದಾಖಲಾಗಿತ್ತು.
ಇದೇ ಸೆ.17ರಂದು ನಸುಕಿನ 5.30ರ ಸುಮಾರಿಗೆ ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪ 3.7 ತೀವ್ರತೆಯ ಲಘು ಭೂಕಂಪನ ಸಂಭವಿಸಿತ್ತು. ಹೀಗೆ ಒಂದೇ ತಿಂಗಳಲ್ಲಿ ತಾಲ್ಲೂಕಿನಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪದೇಪದೇ ಭೂಕಂಪನ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಅಧ್ಯಯನ ನಡೆಸಬೇಕು. ಭೂಕಂಪನಕ್ಕೆ ಕಾರಣವೇನು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಿ, ಸಾರ್ವಜನಿಕರಲ್ಲಿರುವ ಆತಂಕವನ್ನು ದೂರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



