ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾರದ ಸರ ಹಾಗೂ ಐಫೋನ್ ಆಸೆಗಾಗಿ ದಂಪತಿ ತಾವು ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ.
ಒಂದು ತಿಂಗಳು ಮಗುವನ್ನು ಮಾರಾಟ ಮಾಡಿದ ಆರೋಪದ ಮೇಲೆ ಪೋಷಕರು ಹಾಗೂ ಇತರ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಐಷಾರಾಮಿ ಲೈಫ್‌ಸ್ಟೈಲ್, ಚಿನ್ನ ಹಾಗೂ ಹಣದ ಆಸೆಗೆ ಮಗುವನ್ನು ಮಾರಾಟ ಮಾಡಿದ್ದಕ್ಕಾಗಿ ಪೋಷಕರು ಒಪ್ಪಿಕೊಂಡಿದ್ದಾರೆ.
ನಾವು ಲಿವ್ ಇನ್ ಸಂಬಂಧದಲ್ಲಿ ಇದ್ದೆವು. ಮಗುವನ್ನು ಸಾಕುವುದು ಕಷ್ಟವಾಗಿತ್ತು. ಚೈನ್, ಹಣ ಹಾಗೂ ಐ ಫೋನ್‌ಗೆ ದುಡ್ಡು ಇರಲಿಲ್ಲ. ಇದಕ್ಕಾಗಿ ಮಗುವನ್ನು ಮಾರಾಟ ಮಾಡಿದ್ದೇವೆ ಎಂದು ಲಿವ್ ಇನ್ ಜೋಡಿ ಒಪ್ಪಿಕೊಂಡಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಮಗು ಹುಟ್ಟಿದ ಒಂದು ತಿಂಗಳ ಬಳಿಕ ಲಿವ್ ಇನ್ ಪಾರ್ಟ್‌ನರ್ ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ವಿಚಾರಣೆ ವೇಳೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಮಗು ಇಲ್ಲ ಎನ್ನುವುದು ಗಮನಕ್ಕೆ ಬಂದಿತ್ತು. ತನಿಖೆಯ ನಂತರ ಮಧ್ಯವರ್ತಿಗಳ ಮೂಲಕ ಮಗುವನ್ನು ಮಾರಾಟ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಸದ್ಯ ಹೈದರಾಬಾದ್‌ನ ಜೋಡಿಗೆ ಮಾರಾಟ ಮಾಡಿದ್ದ ಮಗುವನ್ನು ಪೊಲೀಸರು ವಾಪಾಸ್ ಪಡೆದಿದ್ದಾರೆ.
ಭಾರತದಲ್ಲಿ ಹಣಕ್ಕಾಗಿ ಮಕ್ಕಳನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಮಗುವನ್ನು ಮಾರುವುದು, ಪಡೆಯುವುದು ಎರಡೂ ತಪ್ಪು. ಭಾರತದಲ್ಲಿ ಮಗುವನ್ನು ದತ್ತು ಪಡೆಯಲು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಬೇಕು. ಭಾರತೀಯ ನ್ಯಾಯ ಸಂಹಿತೆ ಮತ್ತು ಬಾಲಾಪರಾಧ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪಾಲನೆ) ಕಾಯ್ದೆ-2015ರ ಸೆಕ್ಷನ್ 81ರ ಪ್ರಕಾರ ಮಕ್ಕಳನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಗಂಭೀರ ಅಪರಾಧ. ತಪ್ಪಿತಸ್ಥರಿಗೆ ಐದು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಬಹುದು. ಆಸ್ಪತ್ರೆ ಸಿಬ್ಬಂದಿ ಅಥವಾ ವೈದ್ಯರು ಭಾಗಿಯಾಗಿದ್ದರೆ ಶಿಕ್ಷೆ ಏಳು ವರ್ಷಗಳವರೆಗೆ ಹೆಚ್ಚಾಗಬಹುದು.



