ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಎಇಯ ಅಬುಧಾಬಿಯಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧ ನ್ಯಾಯ ಕುರಿತು ಆಯೋಜಿಸಲಾಗಿದ್ದ 15ನೇ ವಿಶ್ವಸಂಸ್ಥೆಯ ಕಾಂಗ್ರೆಸ್ ಸಮಾವೇಶದಲ್ಲಿ ಭಾರತವು ಭಾಗವಹಿಸಿ, ದೇಶದಲ್ಲಿ ಜಾರಿಗೆ ತರಲಾಗಿರುವ ಐತಿಹಾಸಿಕ ನ್ಯಾಯಾಂಗ ಸುಧಾರಣೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಗೊಳ್ಳುತ್ತಿರುವ ಜಾಗತಿಕ ಕಾನೂನು ಸಹಭಾಗಿತ್ವದ ಯಶಸ್ಸನ್ನು ಜಗತ್ತಿನ ಎದುರು ಪ್ರದರ್ಶಿಸಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಅವರ ನೇತೃತ್ವದ ಭಾರತೀಯ ನಿಯೋಗವು, ದೇಶದ ಹೊಸ ಅಪರಾಧ ಕಾನೂನುಗಳು ಮತ್ತು ಸೈಬರ್ ಅಪರಾಧ ತಡೆಗೆ ಭಾರತ ಅಳವಡಿಸಿಕೊಂಡಿರುವ ಡಿಜಿಟಲ್ ತಂತ್ರಜ್ಞಾನದ ಬದ್ಧತೆಯನ್ನು ಜಾಗತಿಕ ವೇದಿಕೆಯಲ್ಲಿ ಮುಂಚೂಣಿಗೆ ತಂದಿದೆ.
“ಡಿಜಿಟಲ್ ಯುಗದಲ್ಲಿ ಜನರು ಮತ್ತು ಗ್ರಹದ ರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯನ್ನು ಸಾಧಿಸುವುದಕ್ಕಾಗಿ ಅಪರಾಧ ತಡೆಗಟ್ಟುವಿಕೆ, ಅಪರಾಧ ನ್ಯಾಯ ಮತ್ತು ಕಾನೂನಿನ ಆಳ್ವಿಕೆಯನ್ನು ವೇಗಗೊಳಿಸುವುದು” ಎಂಬ ಮಹತ್ವದ ಧ್ಯೇಯವಾಕ್ಯದೊಂದಿಗೆ ಯುಎಇಯ ಅಬುಧಾಬಿಯಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧ ನ್ಯಾಯ ಕುರಿತ 15ನೇ ವಿಶ್ವಸಂಸ್ಥೆಯ ಕಾಂಗ್ರೆಸ್ ಸಮಾವೇಶ ಆಯೋಜನೆಗೊಂಡಿದೆ.
ಈ ವೇಳೆ ಅರ್ಜುನ್ ರಾಮ್ ಮೇಘವಾಲ್ ಅವರು ಯುಎಇಯ ಕಾನೂನು ಸಚಿವರ ಅಬ್ದುಲ್ಲಾ ಸುಲ್ತಾನ್ ಬಿನ್ ಅವಾದ್ ಅಲ್ ನುಐಮಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ತಂತ್ರಜ್ಞಾನ ಆಧಾರಿತ ನ್ಯಾಯ ವ್ಯವಸ್ಥೆ, ಭಾರತದ ಹೊಸ ಅಪರಾಧ ಕಾನೂನುಗಳು ಮತ್ತು ಜಾಗತಿಕ ಕಾನೂನು ಸಹಕಾರಕ್ಕೆ ಭಾರತ ನೀಡುತ್ತಿರುವ ಆದ್ಯತೆಯ ಕುರಿತು ಉಭಯ ನಾಯಕರು ವಿಸ್ತೃತವಾಗಿ ಚರ್ಚಿಸಿದರು.
ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ ಹೊಸ ಅಪರಾಧ ಕಾಯ್ದೆಗಳ ಸದ್ದು
ಈ ಬಗ್ಗೆ ಮಾತನಾಡಿರುವ ಅರ್ಜುನ್ ರಾಮ್ ಮೇಘವಾಲ್ ಅವರು, ಭಾರತವು ಇತ್ತೀಚೆಗೆ ಜಾರಿಗೆ ತಂದಿರುವ ಕ್ರಾಂತಿಕಾರಿ ಹೊಸ ಅಪರಾಧ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ಜಾಗತಿಕ ಸಮುದಾಯಕ್ಕೆ ಪರಿಚಯಿಸಿದರು. ಈ ಕಾಯ್ದೆಗಳಲ್ಲಿ ಕೇವಲ ಶಿಕ್ಷೆ ನೀಡುವುದಕ್ಕಿಂತ ಹೆಚ್ಚಾಗಿ ತ್ವರಿತ ನ್ಯಾಯ ಒದಗಿಸುವುದು, ವಿಧಿವಿಜ್ಞಾನ ತನಿಖೆಗೆ ಒತ್ತು ನೀಡುವುದು ಮತ್ತು ಇಡೀ ನ್ಯಾಯಾಂಗ ಪ್ರಕ್ರಿಯೆಯನ್ನು ಡಿಜಿಟಲ್-ಆದ್ಯತೆಯ ಕಾರ್ಯವಿಧಾನವನ್ನಾಗಿ ಬದಲಾಯಿಸಿರುವುದನ್ನು ಅವರು ಸ್ಪಷ್ಟಪಡಿಸಿದರು.
ಸೈಬರ್ ಅಪರಾಧ, ಬ್ಯಾಂಕ್ ಖಾತೆಗಳ ತಡೆಗೆ ಡಿಜಿಟಲ್ ಪ್ರತಿಕ್ರಿಯೆ
ಭಾರತದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳನ್ನು ತಡೆಯಲು ಸರ್ಕಾರ ಜಾರಿಗೆ ತಂದಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮತ್ತು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ನ ಯಶಸ್ಸನ್ನು ಸಚಿವರು ವಿವರಿಸಿದರು. ಈ ಡಿಜಿಟಲ್ ವ್ಯವಸ್ಥೆಯ ಮೂಲಕ ದೇಶದಲ್ಲಿ ಸೈಬರ್ ಅಪರಾಧಗಳ ತ್ವರಿತ ವರದಿ ದಾಖಲಿಸಲು, ಆನ್ಲೈನ್ ವಂಚನೆಗಳನ್ನು ಮುಂಚಿತವಾಗಿಯೇ ತಡೆಗಟ್ಟಲು ಮತ್ತು ಅಕ್ರಮ ಹಣ ವರ್ಗಾವಣೆಗಾಗಿ ಅಪರಾಧಿಗಳು ಬಳಸಿಕೊಳ್ಳುತ್ತಿದ್ದ ‘ಮ್ಯೂಲ್’ (Mule) ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಸಂಘಟಿತ ಅಪರಾಧಗಳ ವಿರುದ್ಧ ಭಾರತದ ಕಠಿಣ ನಿಲುವು
ಭಯೋತ್ಪಾದನೆಯ ವಿರುದ್ಧ ಭಾರತ ಹೊಂದಿರುವ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಮೇಘವಾಲ್ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆ ಪುನರುಚ್ಚರಿಸಿದರು. ಇದರೊಂದಿಗೆ ಜಾಗತಿಕವಾಗಿ ತಲೆನೋವಾಗಿರುವ ಮಾದಕವಸ್ತುಗಳ ಕಳ್ಳಸಾಗಣೆ, ಗಡಿದಾಟುವ ವನ್ಯಜೀವಿ ಅಪರಾಧ, ಅಕ್ರಮವಾಗಿ ಮರ ಕಡಿಯುವುದು ಹಾಗೂ ಅಪಾಯಕಾರಿ ವಿಷಕಾರಿ ತ್ಯಾಜ್ಯವನ್ನು ಸುರಿಯುವಂತಹ ಪರಿಸರ ಸಂಬಂಧಿತ ಸಂಘಟಿತ ಅಪರಾಧಗಳ ವಿರುದ್ಧ ವಿಶ್ವದ ಎಲ್ಲಾ ದೇಶಗಳು ಒಗ್ಗಟ್ಟಾಗಿ ಹೋರಾಡಬೇಕಾದ ಜಾಗತಿಕ ಸಹಕಾರದ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.
ಭಾರತ-ಯುಎಇ ಸಹಭಾಗಿತ್ವ
ಇದೇ ವೇಳೆ ಭಾರತ ಮತ್ತು ಯುಎಇ ನಡುವೆ ಬೆಳೆಯುತ್ತಿರುವ ಕಾನೂನು ಸಹಭಾಗಿತ್ವದ ಬಗ್ಗೆಯೂ ಸಭೆಯಲ್ಲಿ ಗಮನ ಸೆಳೆಯಲಾಯಿತು. ವಿಶೇಷವಾಗಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ಪರಿಹಾರ ಕ್ಷೇತ್ರಗಳಲ್ಲಿ ಉಭಯ ದೇಶಗಳ ಬಾಂಧವ್ಯ ಗಟ್ಟಿಯಾಗುತ್ತಿದೆ. ಭಾರತ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮತ್ತು ದುಬೈ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ನಡುವಿನ ಸಹಭಾಗಿತ್ವವು ಜ್ಞಾನ ವಿನಿಮಯ, ವೃತ್ತಿಪರ ತರಬೇತಿ, ಜಂಟಿ ಸಂಶೋಧನೆ ಮತ್ತು ಡಿಜಿಟಲ್ ವಿವಾದ ಪರಿಹಾರ ವ್ಯವಸ್ಥೆಗಳನ್ನು ಬಲಪಡಿಸುತ್ತಿದೆ. ಪ್ರಸ್ತುತ ದುಬೈ ಕೇಂದ್ರವು ಸುಮಾರು 5,000 ಕ್ಕೂ ಹೆಚ್ಚು ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸುತ್ತಿದ್ದು, ಅವುಗಳ ಒಟ್ಟು ಆರ್ಥಿಕ ಮೌಲ್ಯ ಎಇಡಿ 80 ಬಿಲಿಯನ್ಗೂ ಹೆಚ್ಚಾಗಿದೆ ಎಂಬ ಅಂಕಿ-ಅಂಶವನ್ನು ಹಂಚಿಕೊಳ್ಳಲಾಯಿತು.
ಯುಎನ್ಒಡಿಸಿ ನಿರ್ದೇಶಕಿಯೊಂದಿಗೆ ಚರ್ಚೆ
ತಮ್ಮ ಭೇಟಿಯ ಅವಧಿಯಲ್ಲಿ ಮೇಘವಾಲ್ ಅವರು ವಿಶ್ವಸಂಸ್ಥೆಯ ಮಾದಕವಸ್ತು ಮತ್ತು ಅಪರಾಧ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕಿ ಮೋನಿಕಾ ಜುಮಾ ಅವರನ್ನು ಭೇಟಿಯಾಗಿ ಮಾದಕವಸ್ತು ಜಾಲಗಳ ಧ್ವಂಸ ಮತ್ತು ಸಂಘಟಿತ ಅಪರಾಧಗಳ ವಿರುದ್ಧದ ಸಹಕಾರದ ಕುರಿತು ಮಾತುಕತೆ ನಡೆಸಿದರು.
ಈ ಎಲ್ಲಾ ಬೆಳವಣಿಗೆಗಳು ಕೇವಲ ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರಗಳಷ್ಟೇ ಅಲ್ಲದೆ, ಕಾನೂನು, ನ್ಯಾಯ ಮತ್ತು ಉತ್ತಮ ಆಡಳಿತ ಕ್ಷೇತ್ರಗಳಲ್ಲೂ ಭಾರತ-ಯುಎಇ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ʼಇಂದಿನ ಆಧುನಿಕ ಜಗತ್ತಿನಲ್ಲಿ ಕೇವಲ ಪುಸ್ತಕದ ಕಾನೂನುಗಳು ಸಾಕಾಗುವುದಿಲ್ಲ; ಅದಕ್ಕೆ ತಂತ್ರಜ್ಞಾನದ ಸ್ಪರ್ಶ, ಬಲಿಷ್ಠ ಸಂಸ್ಥೆಗಳು ಮತ್ತು ಜಾಗತಿಕ ಸಹಕಾರದ ಅಚಲ ಬದ್ಧತೆ ಅತ್ಯಗತ್ಯʼ ಎಂಬ ಸಂದೇಶದೊಂದಿಗೆ ಭಾರತ ತನ್ನ ಬದ್ಧತೆಯನ್ನು ಜಗತ್ತಿಗೆ ಸಾರಿದೆ.



