October 1, 2026
Thursday, October 1, 2026
spot_img

ChatGPT ಗೂ ‘ಸರ್’ ಎಂದ 77 ವರ್ಷದ ತಾತ: ವಿಮಾನ ಪ್ರಯಾಣದ ಈ ಕ್ಯೂಟ್ ಸ್ಟೋರಿಗೆ ನೆಟ್ಟಿಗರು ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭವಿಷ್ಯದಲ್ಲಿ ಎಐ ಅಥವಾ ರೋಬೋಟ್‌ಗಳು ಮನುಕುಲದ ಮೇಲೆ ದಾಳಿ ಮಾಡಿದರೂ, ಈ 77 ವರ್ಷದ ತಾತ ಮಾತ್ರ ಖಂಡಿತವಾಗಿಯೂ ಪಾರಾಗುತ್ತಾರೆ. ಯಾಕಂದರೆ, ಅವರು ಎಐ ಚಾಟ್‌ಬಾಟ್‌ಗೆ ನೀಡುವ ಗೌರವ ಅಂತಹದ್ದು. ವಿಮಾನ ಪ್ರಯಾಣದ ವೇಳೆ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಈ ಅಪರೂಪದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ವಿಮಾನದಲ್ಲಿ ನಡೆದಿದ್ದೇನು?

ಟೆಕ್ ಉದ್ಯೋಗಿಯೊಬ್ಬರು ವಿಮಾನದಲ್ಲಿ ಪ್ರಯಾಣಿಸುವಾಗ ಅವರ ಪಕ್ಕದ ಸೀಟಿನಲ್ಲಿ 77 ವರ್ಷದ ವೃದ್ಧರೊಬ್ಬರು ಕುಳಿತಿದ್ದರು. ಆ ತಾತ ವಿಮಾನ ಟೇಕ್-ಆಫ್ ಆಗುವವರೆಗೂ ಅತ್ಯಂತ ಏಕಾಗ್ರತೆಯಿಂದ ಮೊಬೈಲ್‌ನಲ್ಲಿ ಏನನ್ನೋ ಟೈಪ್ ಮಾಡುತ್ತಿದ್ದರು. ಕುತೂಹಲದಿಂದ ಗಮನಿಸಿದಾಗ, ಆ ವೃದ್ಧರು ‘ವರ್ಟಿಕಲ್ ಫಾರ್ಮಿಂಗ್ ಸ್ಟಾರ್ಟ್‌ಅಪ್’ ಯೋಜನೆಗಾಗಿ ChatGPT ನೆರವು ಪಡೆಯುತ್ತಿದ್ದರು. ತಾತನ ಈ ಬಿಸಿನೆಸ್ ಪ್ಲ್ಯಾನ್ ಮತ್ತು ತಂತ್ರಜ್ಞಾನದ ಬಳಕೆಯನ್ನು ಕಂಡು ಆ ಟೆಕ್ ಉದ್ಯೋಗಿ ದಂಗಾಗಿದ್ದಾರೆ. ನಂತರ ಇಬ್ಬರೂ ಇಡೀ ವಿಮಾನ ಪ್ರಯಾಣದುದ್ದಕ್ಕೂ ಹರಟೆ ಹೊಡೆದಿದ್ದಾರೆ.

ಎಐಗೆ ‘ಸರ್’ ಎಂದು ಕರೆದ ತಾತನ ಸಂಸ್ಕಾರ

ಆದರೆ, ಆ ಟೆಕ್ ಉದ್ಯೋಗಿಯ ಗಮನ ಸೆಳೆದಿದ್ದು ತಾತನ ಉದ್ಯಮದ ಆಸಕ್ತಿ ಮಾತ್ರವಲ್ಲ, ಅವರ ಅಪರೂಪದ ಸಂಸ್ಕಾರ ಮತ್ತು ನಡವಳಿಕೆ. ಸಾಮಾನ್ಯವಾಗಿ ಯುವಕರು ಎಐಗೆ ಕೇವಲ ಆರ್ಡರ್ ಅಥವಾ ಕಮಾಂಡ್‌ಗಳನ್ನು ನೀಡುತ್ತಾರೆ. ಆದರೆ ಈ ತಾತ ಮಾತ್ರ ಚಾಟ್‌ಜಿಪಿಟಿಗೆ ಪ್ರಶ್ನೆ ಕೇಳುವಾಗ ಅತ್ಯಂತ ವಿನಯದಿಂದ “ಸರ್”ಎಂದು ಸಂಬೋಧಿಸುತ್ತಿದ್ದರು.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಟೆಕ್ ಉದ್ಯೋಗಿ, ʼನನ್ನ ಪಕ್ಕ ಕುಳಿತಿದ್ದ 77 ವರ್ಷದ ತಾತ ಚಾಟ್‌ಜಿಪಿಟಿ ಜೊತೆ ಬಿಸಿನೆಸ್ ಪ್ಲ್ಯಾನ್ ರೆಡಿ ಮಾಡುತ್ತಿದ್ದರು. ವಿಶೇಷವೆಂದರೆ ಅವರು ಎಐ ಅನ್ನು ‘ಸರ್’ ಎಂದು ಕರೆಯುತ್ತಿದ್ದರು… ವಾಹ್, ಎಂತಹ ಗೌರವ! ನಾವಿಬ್ಬರೂ ಇಡೀ ಜರ್ನಿ ಮಾತನಾಡಿದ್ದೇವೆ, ಈಗ ನಾವಿಬ್ಬರೂ ಬೆಸ್ಟ್‌ ಫ್ರೆಂಡ್ಸ್. ನಮ್ಮೆಲ್ಲರಿಗಿಂತ ಈ ತಾತ ಭವಿಷ್ಯದ ಮೇಲೆ ಹೆಚ್ಚು ಗಮನ ನೆಟ್ಟಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.

28 ಲಕ್ಷಕ್ಕೂ ಹೆಚ್ಚು ವೀಕ್ಷಣೆ: ನೆಟ್ಟಿಗರಿಂದ ಕಮೆಂಟ್ಸ್

ಈ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಈಗಾಗಲೇ 28 ಲಕ್ಷಕ್ಕೂ ಹೆಚ್ಚು ವ್ಯೂಸ್ ಹಾಗೂ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ತಾತನ ಹಳೇ ಶೈಲಿಯ ವಿನಯ ಮತ್ತು ಹೊಸ ತಂತ್ರಜ್ಞಾನವನ್ನು ಕಲಿಯುವ ಅವರ ಹಪಾಹಪಿಗೆ ಜನರು ಮನಸೋತಿದ್ದಾರೆ.

ಭವಿಷ್ಯದಲ್ಲಿ ಎಐ ರೋಬೋಟ್‌ಗಳು ಮನುಷ್ಯರನ್ನು ಕೊಲ್ಲಲು ಬಂದರೆ, ಈ ತಾತನ ವಿನಯವನ್ನು ನೋಡಿ ಖಂಡಿತವಾಗಿಯೂ ಇವರನ್ನು ಬಿಟ್ಟುಬಿಡುತ್ತವೆ! ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ʼನಾವು ಗೌರವದಿಂದ ಕೇಳಿದರೆ ಎಐ ಕೂಡ ಅತ್ಯಂತ ಮುಕ್ತವಾಗಿ, ವಿನಯದಿಂದ ನಮಗೆ ಹೆಚ್ಚು ಐಡಿಯಾಗಳನ್ನು ನೀಡುತ್ತದೆ. ಎಐಗೆ ಬೈದರೆ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳೇ ಹೇಳಿವೆʼ ಎಂದು ಮತ್ತೊಬ್ಬರು ಗಂಭೀರವಾಗಿ ಬರೆದಿದ್ದಾರೆ.

ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ, ಕಲಿಯುವ ಆಸಕ್ತಿ ಇದ್ದರೆ ಯಾವುದೇ ವಯಸ್ಸಿನಲ್ಲಾದರೂ ಹೊಸ ತಂತ್ರಜ್ಞಾನವನ್ನು ಅಪ್ಪಿಕೊಳ್ಳಬಹುದು ಎಂಬುದಕ್ಕೆ ಈ ತಾತನೇ ಸಾಕ್ಷಿ.

Must Read