ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಜೀವವನ್ನು ಪಣಕ್ಕಿಟ್ಟು ಪ್ರಯಾಣಿಕರನ್ನು ರಕ್ಷಣೆ ಮಾಡಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದು, ನಿಮ್ಮ ಅಸಾಧಾರಣ ಧೈರ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ. ಸಹ ಪೈಲಟ್ನಿಂದ ಚಾಕು ಇರಿತಕ್ಕೆ ಒಳಗಾದರೂ ಪ್ರತಿಹೋರಾಟ ನಡೆಸಿ ಕಾಕ್ಪಿಟ್ ಬಾಗಿಲು ತೆರೆದು ಜನರು ಬರಲು ಅವಕಾಶ ಮಾಡಿಕೊಟ್ಟರು. ವಿಮಾನವನ್ನು ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಂಡಿದ್ದರು. ಪ್ರಯಾಣಿಕರು ಹಾಗೂ ಸಿಬ್ಬಂದಿ ಆಗಮಿಸಿ ದುಷ್ಕರ್ಮಿ ಮೇಲೆ ದಾಳಿ ನಡೆಸಿ ಜನರ ಪ್ರಾಣವನ್ನು ಉಳಿಸಲು ನೆರವಾಗಿದ್ದಾರೆ.ವಾಯುಯಾನಕ್ಕೆ ಸಂಬಂಧಿಸಿದ ದೊಡ್ಡ ದುರಂತವೊಂದನ್ನು ಪೈಲಟ್ನ ಕ್ರಮಗಳು ತಡೆಗಟ್ಟಿವೆ ಎಂದು ನೆತನ್ಯಾಹು ಬಣ್ಣಿಸಿದ್ದಾರೆ. ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ನಾಯಕ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಇಸ್ರೇಲಿ ನಾಯಕರು ಆಶಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ಫ್ಲೈ ದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 174 ಪ್ರಯಾಣಿಕರೊಂದಿಗೆ ದುಬೈನಿಂದ ಟೆಲ್ ಅವಿವ್ ಕಡೆಗೆ ಹೊರಟಿತ್ತು. ಟೇಕಾಫ್ ಆದ ಎರಡು ಗಂಟೆಗಳ ನಂತರ ಕಾಕ್ಪಿಟ್ನಲ್ಲಿ ಪೈಲಟ್ಗಳ ನಡುವೆ ಘರ್ಷಣೆ ನಡೆದಿದೆ. ಓಮನ್ ಪ್ರಜೆಯಾಗಿರುವ ಸಹ ಪೈಲಟ್ ಮುಖ್ಯ ಕ್ಯಾಪ್ಟನ್ ಆಗಿರುವ ಸ್ಮಿತ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ಸ್ಮಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ದೇಹದ ಹಲವು ಭಾಗಗಳಿಂದ ರಕ್ತ ಸುರಿದಿದೆ. ಅಷ್ಟು ನೋವಿದ್ದರೂ ಸ್ಮಿತ್ ವಿಮಾನದ ಕಂಟ್ರೋಲ್ನ್ನು ಸಹ ಪೈಲೆಟ್ಗೆ ನೀಡಿಲ್ಲ. ಸಹ ಪೈಲಟ್ ವಿಮಾನವನ್ನು ಕ್ರಾಶ್ ಮಾಡಲು ಭಾರೀ ಪ್ರಯತ್ನ ಮಾಡಿದ್ದಾರೆ. ಆದರೆ ಸ್ಮಿತ್ ಗಟ್ಟಿಯಾಗಿ ನಿಂತು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಕಾಕ್ಪಿಟ್ನಲ್ಲಿನ ಗಲಾಟೆ ಶಬ್ದಕ್ಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕೆಲ ಧೈರ್ಯಶಾಲಿ ಪ್ರಯಾಣಿಕರು ಸಿಬ್ಬಂದಿಗೆ ಸಾಥ್ ನೀಡಿದ್ದಾರೆ.



