October 1, 2026
Thursday, October 1, 2026
spot_img

ರಾಜ್ಯದಲ್ಲಿ ದೊಡ್ಡ ಕುತಂತ್ರ ನಡೆಯುತ್ತಿದೆ! ಎಸ್‌ಐಆರ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್‌ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಎಸ್‌ಐಆರ್‌ ಬಗೆಗಿನ ಪ್ರಮುಖ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ನೀವೆಲ್ಲರೂ ನೋಡ್ತಾ ಇದ್ದೀರಿ ಎಸ್‌ಐಆರ್‌ ಬಹುದೊಡ್ಡ ಪ್ರಕ್ರಿಯೆ. ಇದರಿಂದಾಗಿ ದೇಶದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿದೆ. ಜನರ ಮತಗಳನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಕೆಲವು ವಿಷಯಗಳಲ್ಲಿ ವಿಫಲನಾಗಿದ್ದೇನೆ, ಅದನ್ನು ಒಪ್ಪಿಕೊಳ್ಳುತ್ತೇನೆ. ಒಟ್ಟಾರೆ ಒಂದು ಕೋಟಿಗೂ ಅಧಿಕ ಮತಗಳು ಕಡಿಮೆಯಾಗಿವೆ. ಇದಕ್ಕೆ ಹತ್ತಾರು ಕಾರಣಗಳೂ ಇವೆ. ಇದರಲ್ಲಿ ಅರ್ಧದಷ್ಟು ಜನರಿಗೆ ನೊಟೀಸ್‌ ನೀಡಲಾಗಿದೆ ಎಂದಿದ್ದಾರೆ.

ಮೂರು ದಿನಗಳ ಒಳಗೆ ಅರ್ಜಿ ಹಾಗೂ ಆಕ್ಷೇಪಣೆ ಸಲ್ಲಿಸುವ ವೇಳೆ ಬಿಜೆಪಿ ನಾಯಕರು ತಮ್ಮ ನಿರ್ದೇಶನದಿಂದ ಅಲ್ಪಸಂಖ್ಯಾತರು ಹಾಗೂ ದಲಿತರ ಹೆಸರುಗಳನ್ನು ಮತಪಟ್ಟಿಯಿಂದ ಡಿಲೀಟ್‌ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಫಾರ್ಮ್-7 ನೀಡಲಾಗುತ್ತಿದೆ ಎಂದು ಸಿಎಂ ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ನಾಯಕರು ದಾಖಲೆಗಳನ್ನು ನೀಡಿದ್ದಾರೆ. ಈ ಬಗ್ಗೆ ಕ್ರಿಮಿನಲ್ ತನಿಖೆಯ ಅಗತ್ಯವಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಮತವನ್ನು ಉಳಿಸುವುದು ತಮ್ಮ ಕರ್ತವ್ಯ ಎಂದಿದ್ದಾರೆ.

BLA-1, BLA-2 ಹಾಗೂ BLOಗಳಿಗೆ ಅರ್ಜಿ ನೀಡಿ ಮತಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಈ ಬಗ್ಗೆ ಸಾರ್ವಜನಿಕರ ಬಳಿ ಇರುವ ಯಾವುದೇ ಮಾಹಿತಿಯನ್ನು ಕೂಡಲೇ ತಮ್ಮ ಕಚೇರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ. ನಾಳೆ ತಾವು ಖುದ್ದಾಗಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ. ಅನೇಕ ಸಂಗತಿಗಳೊಂದಿಗೆ ಈ ವಿಚಾರವನ್ನು ಬಯಲಿಗೆಳೆಯುತ್ತೇನೆ. ಇದಕ್ಕೆ ಜನರ ಮಾಹಿತಿ ಅಗತ್ಯವಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ತಮ್ಮ ಪಕ್ಷದ ಹಾಲಿ ಶಾಸಕರು ಇರುವ ಕ್ಷೇತ್ರಗಳಲ್ಲಿಯೂ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಡೀ ರಾಜ್ಯದಲ್ಲಿ ಎಸ್‌ಐಆರ್‌ಗೆ ಬಿಜೆಪಿ ಹಸ್ತಕ್ಷೇಪ ಮಾಡಿದೆ. ಈಶ್ವರ ಖಂಡ್ರೆ, ನಯನ ಮೋಟಮ್ಮ ಹಾಗೂ ತನ್ವೀರ್‌ ಸೇಠ್‌ ಕ್ಷೇತ್ರದಲ್ಲಿ ಮತಗಳನ್ನು ತೆಗೆದುಹಾಕುವ ಪ್ರತಿಕ್ರಿಯೆ ನಡೆಯುತ್ತಿದೆ. ಇದೆಲ್ಲವೂ ಕುತಂತ್ರ. ಎಲ್ಲರೂ ಜಾಗರೂಕರಾಗಿರಿ. ನೀವು ಫಾರ್ಮ್‌ 7 ಸಲ್ಲಿಸಿದ್ದೀರಿ ಎಂದಾದರೆ ನನಗೆ ಮಾಹಿತಿ ನೀಡಿ. ದಯವಿಟ್ಟು ಈ ಮಾಹಿತಿಯನ್ನು [email protected] ಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.

Must Read