ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಅ.12ಕ್ಕೆ ಮುಂದೂಡಿದೆ.
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ಕುರಿತು ಈಗಾಗಲೇ ಅಪರಾಧ ತನಿಖಾ ಇಲಾಖೆ (CID) ತನಿಖೆ ನಡೆಸುತ್ತಿದೆ. ಹೈಕೋರ್ಟ್ ಸೆ.21ರಂದು ಅಲೋಕ್ ಕುಮಾರ್ ನೇತೃತ್ವದಲ್ಲಿ ಐವರು ಸದಸ್ಯರ SIT ರಚಿಸಿ, ತನಿಖೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿತ್ತು. CID ಹಾಗೂ ಇತರ ತನಿಖಾ ಸಂಸ್ಥೆಗಳು ಸಂಗ್ರಹಿಸಿರುವ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು SITಗೆ ಹಸ್ತಾಂತರಿಸುವಂತೆಯೂ ಆದೇಶಿಸಿತ್ತು.
ರಾಜ್ಯ ಸರ್ಕಾರದ ವಾದ
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಪ್ರಕರಣದ FIR ದಾಖಲಾಗಿದಾಗಿನಿಂದ CID ಸಮಗ್ರವಾಗಿ ತನಿಖೆ ನಡೆಸುತ್ತಿದ್ದು, ತನಿಖೆಯಲ್ಲಿ ಯಾವುದೇ ನಿರ್ದಿಷ್ಟ ಲೋಪವನ್ನು ಹೈಕೋರ್ಟ್ ಗುರುತಿಸಿಲ್ಲ ಎಂದು ವಾದಿಸಿದರು. ಈಗಾಗಲೇ ಹಲವು ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸರ್ಕಾರದ ಪರ ವಾದಿಸಲಾಯಿತು.
ಇದನ್ನೂ ಓದಿ:
ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿಯೇ ಹೈಕೋರ್ಟ್ SIT ರಚಿಸಿದೆ ಎಂದು ವಾದಿಸಿದರು. ಪರಿಣಾಮಕಾರಿ ತನಿಖೆಗಾಗಿ ಪ್ರತ್ಯೇಕ ತಂಡದ ಅಗತ್ಯವಿದೆ ಎಂಬ ನಿಲುವನ್ನು ಅವರು ಮುಂದಿಟ್ಟರು.
ಮಧ್ಯಂತರ ತಡೆ ನೀಡಿದ ಸುಪ್ರೀಂ
ಎರಡೂ ಬದಿಯ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ SIT ರಚನೆ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಅಲೋಕ್ ಕುಮಾರ್ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಿಚಾರಣೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಜೊತೆಗೆ SITಗೆ ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ಸ್ವೀಕಾರಾರ್ಹವಾಗಿರುವ ಇತರ ಸಮರ್ಥ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸಲು ಅವಕಾಶ ನೀಡಿದೆ.



