ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈ ವಿಮಾನದಲ್ಲಿ ಸಹಪೈಲಟ್ನಿಂದ ಚಾಕು ದಾಳಿಗೆ ಒಳಪಟ್ಟು, ಧೈರ್ಯದಿಂದ ಜನರನ್ನು ರಕ್ಷಣೆ ಮಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಬಗ್ಗೆ ಬಾಲಕಿಯೊಬ್ಬಳು ಮಾತನಾಡಿದ್ದಾರೆ.
ದಾಳಿಯಾದ ವಿಮಾನದ ಮೊದಲ ಸೀಟ್ನಲ್ಲಿಯೇ ಕುಳಿತಿದ್ದ ಎಂಟು ವರ್ಷದ ಬಾಲಕಿ ಅಲ್ಲಿ ಏನೆಲ್ಲಾ ಆಗಿತ್ತು ಎನ್ನುವುದನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾಳೆ.
ಒಬ್ಬರು ಮಹಿಳೆ ಕಾಕ್ಪಿಟ್ನ ಬಳಿ ನೋಡಿದ್ರು, ಕೆಳಗೆ ರಕ್ತ ಹರಿಯುತ್ತಿತ್ತು. ಅಮ್ಮ ನನಗೆ ಆ ಕಡೆ ನೋಡದಂತೆ ಹೇಳಿದರು. ಆ ಮಹಿಳೆ ಅಲ್ಲಿ ಚಾಕು ಇರಿದಿದ್ದಾರೆ, ಚಾಕಿ ಇರಿದಿದ್ದಾರೆ. ಪೈಲಟ್ ಗಾಯಗೊಂಡಿದ್ದಾರೆ ಎಂದು ಜೋರಾಗಿ ಕೂಗಿಕೊಂಡರು. ಸ್ವಲ್ಪಹೊತ್ತು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದಾದ ನಂತರ ಇಬ್ಬರು ಅಂಕಲ್ ಕಾಕ್ಪಿಟ್ ಬಳಿ ಹೋದರು. ಪೈಲಟ್ ಅಂಕಲ್ನನ್ನು ಸೇವ್ ಮಾಡಿದರು ಎಂದು ಹೇಳಿದ್ದಾಳೆ.
ನಮ್ಮ ವಿಮಾನ ಕೆಳಗೆ ಕೆಳಗೆ ಹೋಗುತ್ತಲೇ ಇತ್ತು. ಪ್ರತೀ ಸೆಕೆಂಡ್ಗೂ ನಾವು ಬದುಕುತ್ತೀವಾ ಇಲ್ಲವಾ ಎನ್ನುವ ಭಯ ಆಗುತ್ತಿತ್ತು. ನಾನು ಬರೀ ದೇವರನ್ನು ನೆನೆಸಿಕೊಳ್ಳುತ್ತಲೇ ಇದ್ದೆ. ಈವರೆಗೂ ನಾನೇನೆ ಕೆಟ್ಟ ಕೆಲಸ ಮಾಡಿದ್ದರೂ ನನ್ನನ್ನು ಕ್ಷಮಿಸು, ಇಂದು ನಮ್ಮನ್ನು ಉಳಿಸು ಎಂದು ಬೇಡಿಕೊಂಡೆ. ವಿಮಾನ ಲ್ಯಾಂಡ್ ಆಯ್ತು, ನಾವು ಬದುಕಿದೆವು. ನಾವು ಹೇಗೆ ಸೇವ್ ಆದೆವೋ ಗೊತ್ತಿಲ್ಲ. ನನ್ನ ಪಾಲಿಗೆ ಆ ಇಬ್ಬರು ಅಂಕಲ್ಗಳು ಕೂಡ ಯಾವ ಆವೆಂಜರ್ಸ್ಗೂ ಕಮ್ಮಿ ಇಲ್ಲ. ನಮ್ಮ ಕ್ಯಾಪ್ಟನ್, ಕ್ಯಾಪ್ಟನ್ ಅಮೆರಿಕ ಎಂದು ಹೊಗಳಿದ್ದಾಳೆ.
ಕ್ಯಾಪ್ಟನ್ ಅಂಕಲ್ ಹೊಟ್ಟೆಗೆ ಇನ್ನೊಬ್ಬರು ಅಂಕಲ್ ಚುಚ್ಚಿದ್ದು ಯಾಕೆ ಎಂದು ಅಪ್ಪ ಅಮ್ಮನನ್ನು ಕೇಳಿದೆ. ಅವರು ಹೆಚ್ಚೇನು ಹೇಳಿಲ್ಲ. ನಾವೆಲ್ಲರೂ ಒಳ್ಳೆಯವರು, ದೇವರು ನಮ್ಮನ್ನು ಕಾಪಾಡಿದ ಎಂದು ಬಾಲಕಿ ಮುಗ್ಧವಾಗಿ ಹೇಳಿದ್ದಾಳೆ.



