ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸ್ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿದ್ದ ಪ್ರಮುಖ ಆರೋಪಿಯೊಬ್ಬನಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 2018 ರ ಉಗ್ರರ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ಮತ್ತು ವಿಳಂಬವನ್ನು ಆಧರಿಸಿ ನ್ಯಾಯಾಲಯವು ಈ ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ನವಿನ್ ಚಾವ್ಲಾ ಮತ್ತು ಅರುಣ್ ಭರದ್ವಾಜ್ ಅವರಿದ್ದ ವಿಭಾಗೀಯ ಪೀಠವು, ವಿಶೇಷ ಎನ್ಐಎ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದುಗೊಳಿಸಿ ಆರೋಪಿ ಮೊಹಮ್ಮದ್ ಶಹಜಾದ್ ಕಮಲ್ನನ್ನು ಬಿಡುಗಡೆ ಮಾಡಲು ಆದೇಶಿಸಿದೆ.
ವಿಚಾರಣೆ ವಿಳಂಬ
ಆರೋಪಿ ಮೊಹಮ್ಮದ್ ಶಹಜಾದ್ ಕಮಲ್ 2021 ರ ಆಗಸ್ಟ್ 31 ರಿಂದ ಕಸ್ಟಡಿಯಲ್ಲಿದ್ದಾನೆ. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ಒಟ್ಟು 161 ಸಾಕ್ಷಿಗಳನ್ನು ಹೆಸರಿಸಿದ್ದು, ಇದುವರೆಗೆ ಕೇವಲ ಒಬ್ಬ ಸಾಕ್ಷಿಯ ವಿಚಾರಣೆ ಮಾತ್ರ ಪ್ರಗತಿಯಲ್ಲಿದೆ. ಈ ವಿಚಾರಣೆ ಮುಗಿಯುವ ಸಾಧ್ಯತೆ ಇಲ್ಲದಿರುವುದನ್ನು ಕೋರ್ಟ್ ಗಮನಿಸಿದೆ.
ಐಸಿಸ್ ನಂಟಿನ ಗಂಭೀರ ಆರೋಪ
ಕಮಲ್ನನ್ನು ‘ಹರ್ಕತ್-ಉಲ್-ಹರ್ಬ್-ಎ-ಇಸ್ಲಾಂ’ ಎಂಬ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಸಂಘಟನೆಯು ಐಸಿಸ್ ಜೊತೆ ನಂಟು ಹೊಂದಿದ್ದು, ಆರೋಪಿಯು ಉಗ್ರ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ್ದಾಗಿ ಎನ್ಐಎ ಆರೋಪಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.
ಸಾಕ್ಷ್ಯಾಧಾರಗಳ ಕೊರತೆ
ಫೇಸ್ಬುಕ್ ಮತ್ತು ವಾಟ್ಸಾಪ್ ಚಾಟ್ಗಳ ಆಧಾರದ ಮೇಲೆ ಎನ್ಐಎ ಆರೋಪ ಹೊರಿಸಿತ್ತು. ಆದರೆ, ಪ್ರಸ್ತುತ ಹಂತದಲ್ಲಿ ಈ ಆಕ್ಷೇಪಾರ್ಹ ಸಂದೇಶಗಳು ಕಮಲ್ ಅವರ ಮೊಬೈಲ್ನಿಂದಲೇ ಹೋಗಿವೆ ಎಂಬುದಕ್ಕೆ ಯಾವುದೇ ಸೂಕ್ತ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಪ್ರಕರಣದ ಇತರ ಸಹ-ಆರೋಪಿಗಳಿಗೆ ಈಗಾಗಲೇ ಜಾಮೀನು ಸಿಕ್ಕಿರುವುದನ್ನು ಕೋರ್ಟ್ ಉಲ್ಲೇಖಿಸಿದೆ.
ಇದನ್ನೂ ಓದಿ:
ಷರತ್ತು ಬದ್ಧ ಜಾಮೀನು
ಆರೋಪಿಗೆ ಬೇಲ್ ನೀಡುವಾಗ ನ್ಯಾಯಾಲಯವು ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ. ತಲಾ 50,000 ರೂ.ಗಳ ವೈಯಕ್ತಿಕ ಬಾಂಡ್, ಪಾಸ್ಪೋರ್ಟ್ ಸರೆಂಡರ್ ಮಾಡುವುದು, ದೇಶ ಬಿಟ್ಟು ಹೋಗದಂತೆ ನಿರ್ಬಂಧ ಮತ್ತು ತನ್ನ ಸ್ವಗ್ರಾಮವಾದ ಹಾಪುರ್ ಜಿಲ್ಲೆಯನ್ನು ದಾಟಬಾರದು ಎಂದು ಆದೇಶಿಸಲಾಗಿದೆ. ಜೊತೆಗೆ ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಹಾಗೂ ನಿಯಮಿತವಾಗಿ ಎನ್ಐಎ ಕಚೇರಿಗೆ ವರದಿ ಒಪ್ಪಿಸುವಂತೆ ಸೂಚಿಸಲಾಗಿದೆ.



