October 1, 2026
Thursday, October 1, 2026
spot_img

‘ವೋಟ್ ಚೋರಿ’ ಆರೋಪದ ಹಿಂದೆ ಮೋದಿ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ: ಜಗದೀಶ್ ಶೆಟ್ಟರ್

ಹೊಸದಿಗಂತ ವರದಿ ಬೆಳಗಾವಿ:

ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ ಕೇಂದ್ರದ ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತಗಳ್ಳತನದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಗುರುವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ವಿಪಕ್ಷಗಳು ಮಾಡುತ್ತಿರುವ ಟೀಕೆಯನ್ನು ಖಂಡಿಸಿದರು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶದಲ್ಲಿ ಸೋಲನುಭವಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಮಸಿ ಬಳಿಯಲು ನಿರರ್ಥಕ ಪ್ರಯತ್ನ ನಡೆಸುತ್ತಿವೆ ಎಂದು ಆರೋಪಿಸಿದರು.

ಮತದಾರರ ಪಟ್ಟಿಯಿಂದ ಮೃತರು ಹಾಗೂ ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕುವ ಸಾಮಾನ್ಯ ಪ್ರಕ್ರಿಯೆಯನ್ನೂ ರಾಹುಲ್ ಗಾಂಧಿ ‘ವೋಟ್ ಚೋರಿ’ ಎಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು. ನಿಜವಾಗಿಯೂ ಮತಕಳ್ಳತನ ನಡೆದಿದ್ದರೆ ವಿಪಕ್ಷಗಳು ನ್ಯಾಯಾಲಯದ ಮೆಟ್ಟಿಲೇರಲು ಏಕೆ ಹಿಂದೇಟು ಹಾಕುತ್ತಿವೆ ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:

ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧವೂ ಶೆಟ್ಟರ್ ವಾಗ್ದಾಳಿ ನಡೆಸಿದರು. ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ಆರೋಪಿಸಿದ ಅವರು, ಗ್ಯಾರಂಟಿ ಯೋಜನೆಗಳ ಭರಾಟೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದರು. ಗುತ್ತಿಗೆದಾರರಿಗೆ ಸುಮಾರು 38 ಸಾವಿರ ಕೋಟಿ ಬಿಲ್ ಬಾಕಿ ಉಳಿದಿದೆ ಎಂದು ಹೇಳಿದ ಅವರು, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಡ್ಡೆ ತೋರುತ್ತಿದ್ದಾರೆ ಎಂದು ಟೀಕಿಸಿದರು.

ಯಡಿಯೂರಪ್ಪ ಅವರ ಮೇಲೆ ಹೊಣೆ ಹೊರಿಸುವ ನಡವಳಿಕೆಯನ್ನು ಡಿ.ಕೆ. ಶಿವಕುಮಾರ್ ಬಿಡಬೇಕು ಎಂದು ಶೆಟ್ಟರ್ ಎಚ್ಚರಿಸಿದರು.

ವೀರಶೈವ ಮಠಾಧೀಶರ ಕುರಿತು ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗಳನ್ನೂ ಟೀಕಿಸಿದ ಶೆಟ್ಟರ್, ಇಂತಹ ವ್ಯಂಗ್ಯದ ಮಾತುಗಳು ಅವರ ದುರಹಂಕಾರವನ್ನು ತೋರಿಸುತ್ತವೆ ಎಂದು ಹೇಳಿದರು. ಅಧಿಕಾರದ ಅಮಲು ನೆತ್ತಿಗೇರಿರುವುದರಿಂದಲೇ ಮಠಗಳು ಹಾಗೂ ಸ್ವಾಮೀಜಿಗಳ ಕುರಿತು ಅವಹೇಳನಕಾರಿ ಹೇಳಿಕೆಗಳು ಬರುತ್ತಿವೆ ಎಂದು ಆರೋಪಿಸಿದ ಅವರು, ಕೂಡಲೇ ಗುರು ಅಜ್ಜಯ್ಯನವರ ಬಳಿ ತೆರಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ವಿಧಾನಸೌಧದಲ್ಲಿ ಉರ್ದು ಹಬ್ಬ ಆಚರಿಸಲು ಮುಂದಾಗಿರುವುದನ್ನು ವಿರೋಧಿಸಿದ ಅವರು, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಧರ್ಮಗಳ ನಡುವೆ ಒಡಕು ಮೂಡಿಸುವ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

Must Read