October 1, 2026
Thursday, October 1, 2026
spot_img

ವಿಶೇಷಚೇತನರ ಮಾಸಾಶನ 5 ಸಾವಿರಕ್ಕೆ ಏರಿಸಿ: ಸರ್ಕಾರಕ್ಕೆ ಆರ್.ಅಶೋಕ್ ಆಗ್ರಹ

ಹೊಸದಿಗಂತ ವರದಿ ರಾಮನಗರ:

 ಸಿಎಂ ಡಿಕೆಶಿ ನೇತೃತ್ವದ ರಾಜ್ಯ ಸರ್ಕಾರ ಹೃದಯಹೀನ ಸರ್ಕಾರವಾಗಿದ್ದು, ವಿಶೇಷಚೇತನರ ಅಹವಾಲುಗಳನ್ನು ಕೇಳಿಲ್ಲ. ಕೂಡಲೇ ವಿಶೇಷಚೇತನರ ಮಾಸಾಶನವನ್ನು 5,000 ರೂ. ಏರಿಕೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹಿಸಿದರು.

ನಗರದಲ್ಲಿ ವಿಶೇಷಚೇತನರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ವಿಶೇಷಚೇತನರಿಂದ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ನೀವು ಮಾಡುತ್ತಿರುವ ಧರಣಿಗೆ ಪ್ರತಿಕ್ರಿಯೆಯಾಗಿ ಜಿಲ್ಲಾಧಿಕಾರಿ ನನ್ನೊಂದಿಗೆ ಮಾತಾಡಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಬರಲು ಸಾಧ್ಯವಾಗಿಲ್ಲ ಎಂದು ಡಿಸಿ ಹೇಳಿದ್ದಾರೆ ಎಂದರು.

ಬಿಜೆಪಿ ಅವಧಿಯಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ 700 ರೂ. ಇದ್ದ ಮಾಸಾಶನವನ್ನು 1,400 ರೂ. ಮಾಡಿದ್ದೆ. ಆಸಿಡ್‌ ದಾಳಿಗೊಳಗಾದ ಹೆಣ್ಣುಮಕ್ಕಳಿಗೆ ಮಾಸಿಕ 3,000 ರೂ. ಅನ್ನು 10,000 ರೂ. ಮಾಡಿದ್ದೆ. ಈ ಮೂಲಕ ಅವರಿಗೆ ಔಷಧಿಗೆ ಸಹಾಯವಾಗಿತ್ತು. ಈಗ ವಿಶೇಷಚೇತನರ ಮಾಸಾಶನವನ್ನು 5,000 ರೂ. ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದಾಗ ಅಲ್ಲಿನ ಬಿಜೆಪಿ ಸಿಎಂ 5,000 ರೂ.ಗೆ ಏರಿಕೆ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ 3,000 ರೂ. ಆಗಿದೆ ಎಂದು ಹೇಳಿದರು.

ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಾಸಾಶನವನ್ನು 5,000 ರೂ. ಗೆ ಏರಿಕೆ ಮಾಡಬೇಕಿತ್ತು. ಆದರೆ ಇದು ಹೃದಯ ಇಲ್ಲದ ಬಂಡೆ ಸರ್ಕಾರವಾಗಿದೆ. ರಾಮನಗರ ಅವರದ್ದೇ ಜಿಲ್ಲೆಯಾಗಿದ್ದು, ವಿಶೇಷಚೇತನರನ್ನು ಭೇಟಿಯಾಗಿ ಮಾತಾಡಬೇಕಿತ್ತು. ಎಷ್ಟು ಏರಿಸುತ್ತೇವೆಂದಾದರೂ ಭರವಸೆ ನೀಡಬೇಕಿತ್ತು. ಐದಾರು ತಿಂಗಳಿಂದ ಯಾರಿಗೂ ಪಿಂಚಣಿಗಳು ಬರುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಬಯೋಮೆಟ್ರಿಕ್‌, ಸರ್ವೆ ಎಂದೆಲ್ಲ ನೆಪ ಹೇಳುತ್ತಾರೆ. ಸ್ವಾತಂತ್ರ್ಯ ಬಂದಾಗಿಂದಲೂ ಸರ್ವೆ ನಡೆಯುತ್ತಲೇ ಇದ್ದು, ಅದರಲ್ಲಿ ವಿಶೇಷವೇನೂ ಇಲ್ಲ. ಆರ್ಥಿಕ ಇಲಾಖೆ ಪಾಪರ್‌ ಆಗಿದೆ ಎಂದು ತಿಳಿವಳಿಕೆ ಪತ್ರ ನೀಡಲಾಗಿದೆ. ಹಣ ಇಲ್ಲದೆ, ನಾವು ಪಾಪರ್‌ ಆಗಿದ್ದೇವೆ, ನೀವೇ ಡೊನೇಶನ್‌ ಕೊಡಿ ಎಂದು ಬೇಡಿಕೊಳ್ಳಲಿ ಎಂದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರು ರಸ್ತೆಗೆ ಜಲ್ಲಿ ಹಾಕಿ ಎಂದು ಅಧಿಕಾರಿಗಳ ಬಳಿ ಕೈ ಮುಗಿಯವ ಸ್ಥಿತಿ ಬಂದಿದೆ. ನಾಯಿಯನ್ನು ಬಾಲ ಅಲ್ಲಾಡಿಸುವಂತೆ ಈ ಸರ್ಕಾರದ ಪರಿಸ್ಥಿತಿಯಾಗಿದೆ. ಒಬ್ಬ ಸಚಿವ ಎಂಜಿನಿಯರ್‌ ಬಳಿ ಮನವಿ ಮಾಡುತ್ತಾರೆಂದರೆ, ಕೈಯಿಂದ ಹಣ ಹಾಕಿ ರಸ್ತೆ ಮಾಡಿ ಎಂದರ್ಥ. ಒಬ್ಬ ಸಚಿವರು ಬಂದು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಗ್ಯಾರಂಟಿಗಳಿಂದಾಗಿ ಯಾರಿಗೂ ಹಣ ಕೊಡಲು ಆಗುತ್ತಿಲ್ಲ ಎಂದಿದ್ದಾರೆ. ಸಚಿವ ಬಸವರಾಜ ರಾಯರೆಡ್ಡಿ ಅವರು ಗ್ಯಾರಂಟಿ ಬೇಕೋ ರಸ್ತೆ ಬೇಕೋ ಎಂದು ಪ್ರಶ್ನೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ:

ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡುವ ಕೆಲಸವಾಗಿತ್ತು. ಇಂತಹ ಕೆಲಸವನ್ನು ಈಗಿನ ಸರ್ಕಾರ ಮಾಡಬೇಕು. ಈಗಿನ ಕಾಲದ ದರಕ್ಕೆ ತಕ್ಕಂತೆ ಪಿಂಚಣಿ ಏರಿಸಬೇಕಿದೆ. ಪ್ರತಿ ವರ್ಷ ಪಿಂಚಣಿಗಳಿಗೆ 10,000 ಕೋಟಿ ರೂ. ಮೀಸಲಿಡಲಾಗುತ್ತದೆ. ಅದನ್ನು ಹೆಚ್ಚಳ ಮಾಡುವುದು ಸರ್ಕಾರದ ಕರ್ತವ್ಯ. ಹಣವಿಲ್ಲ ಎಂಬ ಕಾರಣಕ್ಕೆ ಹೆಚ್ಚಳ ಮಾಡದೇ ಇರಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

Must Read