ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪ್ರಸಿದ್ಧ ದಿವೇಆಗರ್ ಕಡಲತೀರದಲ್ಲಿ ಗುರುವಾರ ಭೀಕರ ದುರಂತ ಸಂಭವಿಸಿದ್ದು, ಪುಣೆಯ ಆಳಂದಿಯಿಂದ ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಸಮುದ್ರದ ಆಳ ಮತ್ತು ನೀರಿನ ಸೆಳೆತದ ಅರಿವಿಲ್ಲದ ಪರಿಣಾಮ ವಿದ್ಯಾರ್ಥಿಗಳು ಅಲೆಗಳ ನಡುವೆ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ 8 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.
ವಿನ್ನರ್ಸ್ ಅಕಾಡೆಮಿಗೆ ಸೇರಿದ ವಿದ್ಯಾರ್ಥಿಗಳು
ಆಳಂದಿಯ ವಿನ್ನರ್ಸ್ ಅಕಾಡೆಮಿಗೆ ಸೇರಿದ 48 ಮಂದಿಯ ತಂಡ ಪ್ರವಾಸಕ್ಕೆ ತೆರಳಿತ್ತು. ತಂಡದಲ್ಲಿ 25 ಬಾಲಕರು, 17 ಬಾಲಕಿಯರು ಹಾಗೂ 6 ಶಿಕ್ಷಕರು ಇದ್ದರು. ಸಂಜೆ ಸುಮಾರು 5.30ರ ವೇಳೆಗೆ ವಿದ್ಯಾರ್ಥಿಗಳ ಗುಂಪು ದಿವೇಆಗರ್ ಕಡಲತೀರಕ್ಕೆ ತೆರಳಿತ್ತು. ಈ ವೇಳೆ 8 ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಿದ್ದು, ನೀರಿನ ಆಳ ಅರಿಯದೆ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿರುವುದು ಗೊತ್ತಾಗುತ್ತಿದ್ದಂತೆ ಸ್ಥಳೀಯರು ಹಾಗೂ ಮಹಾಕಾಳಿ ವಾಟರ್ ಸ್ಪೋರ್ಟ್ಸ್ ತಂಡದ ಸದಸ್ಯರು ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಅಪಾಯವನ್ನೂ ಲೆಕ್ಕಿಸದೆ ಸಮುದ್ರಕ್ಕೆ ಇಳಿದ ತಂಡವು ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆದಿದೆ. ಬಳಿಕ ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಬೊರ್ಲಿ ಪಂಚತನ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ಸೇರಿದಂತೆ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.
ಮೃತರನ್ನು ತನುಮಯ್ ದತ್ತಾತ್ರೇಯ ವಾಹಿಲೆ, ಸುಮಿತ್ ಭಾರತ್ ಅಹಿರೆ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಾಸನ್ಕರ್, ರಾಜವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಂ ತುಕಾರಾಮ್ ಭಾಂಡವಲ್ಕರ್ ಹಾಗೂ ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ.
ಸಂತಾಪ ಸೂಚಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ
ಘಟನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ನೆರವು ನೀಡಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ದುರಂತದ ಕುರಿತು ತನಿಖೆಗೆ ಆದೇಶಿಸಿರುವ ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್, ಪ್ರವಾಸ ಆಯೋಜನೆಯಲ್ಲಿ ಸುರಕ್ಷತಾ ಕ್ರಮಗಳ ಪಾಲನೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.



