October 2, 2026
Friday, October 2, 2026
spot_img

ಗಾಂಧಿ ಜಯಂತಿ ದಿನವೇ ತಮಿಳುನಾಡಿನಲ್ಲಿ ‘ವೆಟ್ರಿ ಪಯನಂ’ ಉಚಿತ ಬಸ್ ಸೇವೆ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಾಂಧಿ ಜಯಂತಿ ದಿನದಂದೇ ತಮಿಳುನಾಡು ಸರ್ಕಾರ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಭರ್ಜರಿ ಕೊಡುಗೆ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇಂದು ಚೆನ್ನೈನ ಕೊಯಂಬೆಡು ಮತ್ತು ಅಂಬತ್ತೂರಿನಲ್ಲಿ ವಿಸ್ತೃತ ರೂಪದ ‘ವೆಟ್ರಿ ಪಯನಂ ತಿಟ್ಟಂ’ ಉಚಿತ ಬಸ್ ಪ್ರಯಾಣ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ‘ಥಾಯ್ ಮಾಮನ್ ತಂಗ ಮೋತಿರಂ’ ಯೋಜನೆಯಡಿ ಚಿನ್ನದ ಉಂಗುರ ನೀಡುವ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಗೂ ಚಾಲನೆ ಸಿಕ್ಕಿದೆ.

ಯೋಜನೆಯ ವ್ಯಾಪ್ತಿ ವಿಸ್ತರಣೆ

ಇದುವರೆಗೆ ಕೇವಲ ಸಾಮಾನ್ಯ ಸರ್ಕಾರಿ ಬಸ್‌ಗಳಿಗೆ ಸೀಮಿತವಾಗಿದ್ದ ಮಹಿಳೆಯರ ಉಚಿತ ಪ್ರಯಾಣ ಸೌಲಭ್ಯವನ್ನು, ಇನ್ಮುಂದೆ ನಗರ ಮತ್ತು ಮಹಾನಗರ ಪ್ರದೇಶಗಳ ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್ ಮತ್ತು ಡಿಲಕ್ಸ್ ಬಸ್‌ಗಳಿಗೂ ವಿಸ್ತರಿಸಲಾಗಿದೆ.

ಜಿಲ್ಲಾ ಮತ್ತು ಗುಡ್ಡಗಾಡು ಪ್ರದೇಶಗಳಿಗೂ ಅನ್ವಯ

ಜಿಲ್ಲೆಗಳ ನಡುವೆ ಸಂಚರಿಸುವ ಸಾಮಾನ್ಯ ಉಪನಗರ ಬಸ್‌ಗಳು ಹಾಗೂ 40 ಕಿ.ಮೀ ಗಿಂತ ಹೆಚ್ಚಿನ ದೂರದ ಗುಡ್ಡಗಾಡು ಪ್ರದೇಶಗಳ ಸಾಮಾನ್ಯ ಬಸ್‌ಗಳಲ್ಲೂ ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

84 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಲಾಭ

ತಮಿಳುನಾಡು ಸರ್ಕಾರದ 7 ಸಾರಿಗೆ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಟ್ಟು 12,692 ಬಸ್‌ಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದ್ದು, ಇದರಿಂದ ಪ್ರತಿದಿನ ಸುಮಾರು 84.32 ಲಕ್ಷ ಮಹಿಳೆಯರು ಸಾರಿಗೆ ವೆಚ್ಚವಿಲ್ಲದೆ ಪ್ರಯಾಣಿಸುವ ನಿರೀಕ್ಷೆಯಿದೆ. ಈ ಯೋಜನೆಯ ಹಿನ್ನೆಲೆಯಲ್ಲಿ ಬಸ್ ನಿರ್ವಾಹಕರು ಪಾಲಿಸಬೇಕಾದ ನಿಯಮಗಳ ಕುರಿತು ವಿಶೇಷ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟುವ ಮಗುವಿಗೆ ಬಂಗಾರದ ಉಂಗುರ


ತಮಿಳು ಸಂಸ್ಕೃತಿಯ ‘ತಾಯ್‌ಮಾವನ ಸೀರು’ (ಸೋದರಮಾವನ ಉಡುಗೊರೆ) ಸಂಪ್ರದಾಯವನ್ನು ಪ್ರತಿಬಿಂಬಿಸುವ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ವಿಶಿಷ್ಟ ಯೋಜನೆಯನ್ನು ಜಾರಿಗೆ ತರಲಾಗಿದೆ.

1 ಗ್ರಾಂ ಚಿನ್ನದ ಉಂಗುರ

ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಸಿಎಂ ವಿಜಯ್ ಅವರಿಂದ ಚಾಲನೆ ಪಡೆದ ಈ ಯೋಜನೆಯಡಿ, ಅರ್ಹ ಕುಟುಂಬಗಳ ನವಜಾತ ಶಿಶುಗಳಿಗೆ 1 ಗ್ರಾಂ ತೂಕದ, 24 ಕ್ಯಾರೆಟ್ ಶುದ್ಧ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಇದನ್ನೂ ಓದಿ:

ಅರ್ಹತೆ ಮತ್ತು ಭದ್ರತೆ

ತಮಿಳುನಾಡಿನ ಖಾಯಂ ನಿವಾಸಿಗಳಾಗಿದ್ದು, ಗರ್ಭಧಾರಣೆ ಮತ್ತು ಶಿಶು ಮೇಲ್ವಿಚಾರಣೆ (PICME) ಅಡಿಯಲ್ಲಿ ನೋಂದಾಯಿಸಿಕೊಂಡು ಆರ್‌ಸಿಎಚ್ ಹೊಂದಿರುವ ತಾಯಂದಿರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಫಲಾನುಭವಿಗಳು ಇ-ಕೆವೈಸಿ ಪರಿಶೀಲಿಸಿದ ಆಧಾರ್ ಕಾರ್ಡ್ ಸಲ್ಲಿಸಬೇಕು. ದುರುಪಯೋಗ ತಡೆಯಲು ಪ್ರತಿ ಚಿನ್ನದ ಉಂಗುರಕ್ಕೂ ವಿಶಿಷ್ಟ ಸಂಖ್ಯೆ ಇರಲಿದೆ.

ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ರಕ್ಷಣೆಗಾಗಿ ಮಹಿಳೆಯರು ಸಾರಿಗೆ ವೆಚ್ಚದ ಹೊರೆ ಹೊರಬಾರದು ಮತ್ತು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುವ ಬಡ ಕುಟುಂಬಗಳಿಗೆ ಆಸರೆಯಾಗಬೇಕು ಎನ್ನುವ ‘ವೆಟ್ರಿ ತಮಿಳಗಂ’ ದೂರದೃಷ್ಟಿಯ ಭಾಗವಾಗಿ ಈ ಯೋಜನೆಗಳನ್ನು ತರಲಾಗಿದೆ ಎಂದು ಸರ್ಕಾರ ತಿಳಿಸಿದೆ.

Must Read