October 3, 2026
Saturday, October 3, 2026
spot_img

ಬೆಂಗಳೂರಿನ PG ಮಾಲೀಕರಿಗೆ ಶಾಕ್: ನಿಯಮ ಉಲ್ಲಂಘಿಸಿದ 10 ಸಾವಿರ ಪಿಜಿಗಳ ವಿರುದ್ಧ ಕ್ರಮಕ್ಕೆ ಜಿಬಿಎ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿರುವ ಪೇಯಿಂಗ್ ಗೆಸ್ಟ್ (PG) ವಸತಿ ನಿಲಯಗಳ ವಿರುದ್ಧ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮಹಾನಗರದಲ್ಲಿ ನಡೆಸಲಾದ ವಿಶೇಷ ಸಮೀಕ್ಷೆಯಿಂದ ಆಘಾತಕಾರಿ ಸತ್ಯಾಂಶ ಹೊರಬಿದ್ದಿದ್ದು, ಒಟ್ಟು ಪಿಜಿಗಳ ಪೈಕಿ ಶೇಕಡಾ 40 ರಷ್ಟು ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಈ ಅಕ್ರಮದ ಸಂಪೂರ್ಣ ವರದಿಯನ್ನು ಜಿಬಿಎ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದೆ.

10 ಸಾವಿರಕ್ಕೂ ಅಧಿಕ ಪಿಜಿಗಳು ಅಕ್ರಮ

ನಡೆಸಿದ ಜಂಟಿ ಸಮೀಕ್ಷೆಯ ಅನ್ವಯ, ಸಿಲಿಕಾನ್ ಸಿಟಿಯಲ್ಲಿ ಸದ್ಯ ಸುಮಾರು 25,000 ಪಿಜಿಗಳಿದ್ದು, ಇವುಗಳಲ್ಲಿ 10,000 ಕ್ಕೂ ಹೆಚ್ಚು ಪಿಜಿಗಳು ಯಾವುದೇ ಪರವಾನಗಿ ಇಲ್ಲದೆ ನಿಯಮಬಾಹಿರವಾಗಿ ನಡೆಯುತ್ತಿವೆ. ಬಹುತೇಕ ಕಟ್ಟಡಗಳಿಗೆ ಮಾನ್ಯತೆ ಪಡೆದ ನಕ್ಷೆಯ ಅನುಮೋದನೆ ಇಲ್ಲ, ಇನ್ನು ಕೆಲವು ಕಡೆ ಅಗ್ನಿಶಾಮಕ ಇಲಾಖೆಯ ಸುರಕ್ಷತಾ ಪ್ರಮಾಣಪತ್ರವಾಗಲಿ ಅಥವಾ ವಾಣಿಜ್ಯ ಲೈಸೆನ್ಸ್ ಆಗಲಿ ಇಲ್ಲದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

15 ದಿನಗಳ ಗಡುವು

ಕಾನೂನು ಉಲ್ಲಂಘಿಸಿರುವ ಇಂತಹ ವಸತಿ ನಿಲಯಗಳಿಗೆ 15 ದಿನಗಳ ಅಂತಿಮ ನೋಟಿಸ್ ಜಾರಿಗೊಳಿಸಲು ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜಿಬಿಎ ಅಧಿಕಾರಿಗಳು, ಬೆಸ್ಕಾಂ ಮತ್ತು ಜಲಮಂಡಳಿ ಉನ್ನತಾಧಿಕಾರಿಗಳೊಂದಿಗೆ ಈಗಾಗಲೇ ಮೊದಲ ಹಂತದ ಸಭೆ ನಡೆಸಿದ್ದು, ಅಕ್ರಮ ಪಿಜಿಗಳ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸುವೂ ಸೇರಿದಂತೆ ಕಠಿಣ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಪಿಜಿ ನಡೆಸಲು ಇರಲೇಬೇಕಾದ ಕಡ್ಡಾಯ ನಿಯಮಗಳಿವು

ಇನ್ಮುಂದೆ ಬೆಂಗಳೂರಿನಲ್ಲಿ ಪಿಜಿ ನಡೆಸಲು 24 ಗಂಟೆಯೂ ಸೆಕ್ಯುರಿಟಿ ಸಿಬ್ಬಂದಿ ಮತ್ತು 30 ದಿನಗಳ ಬ್ಯಾಕಪ್ ಇರುವ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬ ನಿವಾಸಿಗೆ ಕನಿಷ್ಠ 70 ಚದರ ಅಡಿ ವೈಯಕ್ತಿಕ ಜಾಗ, ಶುದ್ಧ ಕುಡಿಯುವ ನೀರು ಹಾಗೂ ನೈರ್ಮಲ್ಯಯುತ ಶೌಚಾಲಯ ಒದಗಿಸಬೇಕು. ಇದರೊಂದಿಗೆ ವಾಣಿಜ್ಯ ಪರವಾನಗಿಗಾಗಿ ಅಗ್ನಿ ಸುರಕ್ಷತಾ ಪ್ರಮಾಣಪತ್ರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಸ್ವಂತ ಅಡುಗೆಮನೆ ಇದ್ದರೆ 3 ತಿಂಗಳೊಳಗೆ FSSAI ಲೈಸೆನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ;

ಪಿಜಿ ಅಸೋಸಿಯೇಷನ್ ಬೆಂಬಲ

ಇದೇ ವೇಳೆ ಪ್ರತಿಕ್ರಿಯಿಸಿರುವ ಬೆಂಗಳೂರು ಪಿಜಿ ಮಾಲೀಕರ ಸಂಘಟನೆ, ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಪಿಜಿಗಳಿದ್ದು, ನಿಯಮಗಳನ್ನು ಗಾಳಿಗೆ ತೂರಿ ಜನರ ಜೀವದ ಜೊತೆ ಚೆಲ್ಲಾಟವಾಡುವ ಪಿಜಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಿದರೆ ತಮ್ಮದೇನೂ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದೆ.

Must Read