ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ವಿಷಪೂರಿತ ಮದ್ಯ ಸೇವಿಸಿ ಹಲವರು ಮೃತಪಟ್ಟಿರುವ ದುರಂತಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಅಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಇದು ಕೇವಲ ಆಕಸ್ಮಿಕ ಘಟನೆಯಲ್ಲ, ಬದಲಾಗಿ ಬಿಜೆಪಿ ಸರ್ಕಾರದ ಘೋರ ನಿರ್ಲಕ್ಷ್ಯದ ಫಲ” ಎಂದು ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. “ಮಣಿಪುರದಲ್ಲಿ ವಿಷಪೂರಿತ ಮದ್ಯಕ್ಕೆ ಹಲವರು ಬಲಿಯಾಗಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ. ಮೊದಲು ಹಿಂಸಾಚಾರವು ನೂರಾರು ಮನೆಗಳನ್ನು ನಾಶಪಡಿಸಿತು, ಈಗ ವಿಷಪೂರಿತ ಮದ್ಯವು ಕುಟುಂಬಗಳನ್ನು ಬೀದಿಗೆ ತರುತ್ತಿದೆ – ಆದರೂ ಸರ್ಕಾರ ಇನ್ನೂ ನಿದ್ದೆ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ವಿಳಂಬವಿಲ್ಲದೆ ಸಂಪೂರ್ಣ ನೆರವು ಹಾಗೂ ಸೂಕ್ತ ಪರಿಹಾರ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
15 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ
ಚಾಂದೇಲ್ ಜಿಲ್ಲೆಯ ಚಕ್ಪಿ ಕರೋಂಗ್ ಎಂಬಲ್ಲಿ ಸ್ಥಳೀಯವಾಗಿ ತಯಾರಿಸಿದ ಮದ್ಯ ಸೇವಿಸಿದ ಪರಿಣಾಮ, ಶಂಕಿತ ಮೆಥನಾಲ್ ವಿಷಬಾಧೆಯಿಂದ ಇದುವರೆಗೆ ಕನಿಷ್ಠ 15 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಸುಮಾರು 150 ರೋಗಿಗಳು ಇಂಫಾಲದ ಶಿಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಹಲವರು ಬಬಿನಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಂತ್ರಸ್ತರಲ್ಲಿ ಹೆಚ್ಚಿನವರು ಚಕ್ಪಿ ಕರೋಂಗ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ವಯಸ್ಕರು ಹಾಗೂ ಮಧ್ಯವಯಸ್ಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರದ ಕ್ರಮ, ತನಿಖೆಗೆ ಆದೇಶ
ಘಟನೆಯ ಬೆನ್ನಲ್ಲೇ ಮಣಿಪುರ ಮುಖ್ಯಮಂತ್ರಿ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ಶುಕ್ರವಾರ ಶಿಜಾ ಮತ್ತು ಬಬಿನಾ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ತರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಸಿಎಂ, ಚಾಂದೇಲ್ ಜಿಲ್ಲೆಗೆ ವಿಶೇಷ ವೈದ್ಯಕೀಯ ತಂಡ ಹಾಗೂ ಅಗತ್ಯ ಔಷಧಿಗಳನ್ನು ರವಾನಿಸಿದ್ದಾರೆ.
ರಾಜ್ಯ ಸರ್ಕಾರವು ಈ ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದೆ. ಅಲ್ಲದೆ, ಅನುಮಾನಾಸ್ಪದವಾಗಿ ಸ್ಥಳೀಯವಾಗಿ ತಯಾರಿಸಿದ ಮದ್ಯವನ್ನು ಸೇವಿಸದಂತೆ ಹಾಗೂ ಅಕ್ರಮ ಮದ್ಯ ದಂಧೆಯ ಬಗ್ಗೆ ಮಾಹಿತಿ ನೀಡುವಂತೆ ಚಾಂದೇಲ್ ಜಿಲ್ಲಾಡಳಿತವು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ಹೊರಡಿಸಿದೆ.



