October 3, 2026
Saturday, October 3, 2026
spot_img

ಮಕ್ಕಳ ಮುಂದೆಯೇ ಹೊಗಳುವುದು, ತೆಗಳುವುದು ಸರಿಯೇ? ಪೋಷಕರೇ, ಈ ವಿಚಾರ ತಿಳಿದುಕೊಳ್ಳಿ

ಎಲ್ಲ ಮಕ್ಕಳು ಚೆನ್ನಾಗಿ ಓದ್ತಾರೆ, ಆದರೆ ನನ್ನ ಮಗ ನೋಡಿ ಕ್ಲಾಸಿಗೆ ಐದನೇ ಸ್ಥಾನದಲ್ಲಿದ್ದಾನೆ, ಮನೆಯಲ್ಲಿ ಓದೋಕೆ ಇಷ್ಟವೇ ಇಲ್ಲ. ದಿನವಿಡೀ ಆಟ ಆಡ್ತಾನೆ. ಇವನು ಉದ್ಧಾರ ಆಗೋಕೆ ಚಾನ್ಸೇ ಇಲ್ಲ ಬಿಡಿ!

ಹೀಗೆಲ್ಲಾ ಮಕ್ಕಳ ಮುಂದೆ ಮಾತನಾಡುವುದು ತಪ್ಪು. ಅದರಲ್ಲಿಯೂ ಮಕ್ಕಳ ಮುಂದೆ ಇನ್ನೊಬ್ಬರ ಜೊತೆ ಮಾತನಾಡುವುದು ಅದಕ್ಕೂ ಮೀರಿದ ತಪ್ಪು. ಮಕ್ಕಳನ್ನು ಬೇರೆಯವರ ಎದುರು ಬಿಟ್ಟುಕೊಡುವುದು ಉತ್ತಮವಲ್ಲ. ನಿಮ್ಮ ಮಗು ಇನ್ನೊಂದು ಮಗುವಿಗೆ ಹೊಡೆದಿದೆ, ಅಥವಾ ಏನೋ ಹೇಳಿದೆ ಎಂದುಕೊಳ್ಳಿ. ಅದನ್ನು ನೀವು ಕಣ್ಣಾರೆ ನೋಡಿರುವುದಿಲ್ಲ. ಬೇರೆ ಮಕ್ಕಳು, ಅವರ ಪೋಷಕರ ಎದುರಿನಲ್ಲಿ ʼಯಾಕೆ ಹಾಗೆ ಮಾಡಿದೆ ತಲೆಯಲ್ಲಿ ಬುದ್ಧಿ ಇಲ್ವಾ? ಮನೆಗೆ ಬಾ ನಿಂಗೆ ಸರಿಯಾಗಿ ಒದೆ ಬೀಳತ್ತೆʼ ಅಂತೆಲ್ಲ ಮಾತನಾಡೋದು ತಪ್ಪು. ಯಾರಾದರೂ ಮಕ್ಕಳ ಬಗ್ಗೆ ಕಂಪ್ಲೆಂಟ್‌ ಮಾಡಿದರೆ ʼಸರಿ ವಿಚಾರಿಸುತ್ತೇನೆʼ ಅಂದಷ್ಟೇ ಹೇಳಿ. ಮನೆಗೆ ಬಂದ ನಂತರವೂ ತಕ್ಷಣ ಆ ವಿಷಯವನ್ನು ತೆಗೆಯಬೇಡಿ. ಸುಮಾರು ಸಮಯದ ನಂತರ ಮಗುವನ್ನು ಮುದ್ದು ಮಾಡಿ, ಪಕ್ಕಕ್ಕೆ ಕೂರಿಸಿಕೊಂಡು ಅಲ್ಲಿ ಏನಾಯ್ತು ಎಂದು ಪ್ರಶ್ನಿಸಿ. ಮಕ್ಕಳು ಸತ್ಯ ಹೇಳಿದರೆ, ಹೊಡೆದೆ ಎಂದು ಒಪ್ಪಿಕೊಂಡರೆ ಬೈಯಬೇಡಿ. ಇನ್ನೆಂದೂ ಸತ್ಯ ಹೇಳಲಾರರು. ಯಾಕೆ ಹಾಗೆ ಮಾಡಬೇಕು ಅನಿಸಿತ್ತು? ಅದು ಯಾಕೆ ತಪ್ಪು ಎಂದು ಹೇಳಿಕೊಡಿ. ಮಕ್ಕಳ ಮನಸ್ಸಿನಲ್ಲಿ ಉತ್ತಮ ವಿಚಾರಗಳನ್ನು ಬಿತ್ತಿ.

ಬೇರೆಯವರ ಎದುರಿನಲ್ಲಿ ತೆಗಳಿದರೆ ಏನಾಗುತ್ತದೆ?

ಬೇರೆಯವರ ಎದುರು, ಘಟನೆ ನಡೆದ ತಕ್ಷಣವೇ ನೀವು ಮಕ್ಕಳಿಗೆ ಜೋರು ಮಾಡಿದರೆ ಅವರು ಒಂದು ನಯಾ ಪೈಸೆಯಷ್ಟೂ ಪಾಠ ಕಲಿಯೋದಿಲ್ಲ. ಎಲ್ಲರೆದುರು ಬೈಸಿಕೊಂಡ ನಾಚಿಕೆ, ಮುಜುಗರದಿಂದ ನಿಮ್ಮನ್ನು ಹೇಟ್‌ ಮಾಡುತ್ತಾರೆ. ಅವರ ಮೆದುಳಿನಲ್ಲಿ ನಿಮ್ಮ ಮಾರಲ್‌ ಪಾಠಗಳ್ಯಾವುದಕ್ಕೂ ಆ ಕ್ಷಣ ಜಾಗವೇ ಇರೋದಿಲ್ಲ. ಇನ್ನೆಂದೂ ಆ ಪಾಠವನ್ನು ಕಲಿಯೋದಿಲ್ಲ.

ನಿಮ್ಮ ಮತ್ತು ಮಕ್ಕಳ ನಡುವಿನ ಅದ್ಭುತ ಬಾಂಧವ್ಯ ನಿಮಗೇ ಗೊತ್ತಿಲ್ಲದಂತೆ ಹಾಳಾಗುತ್ತದೆ. ಇನ್ಯಾರೋ ಸ್ನೇಹಿತರೋ, ನೆಂಟರ ಎದುರು ಮಕ್ಕಳನ್ನು ಬೈದರೆ ಅವರ ನಂಬಿಕೆ ಹಾಳುಮಾಡಿದ್ದೀರಿ ಎನ್ನುವ ಭಾವನೆ ಮಕ್ಕಳಲ್ಲಿ ಮೂಡುತ್ತದೆ. ವಯಸ್ಸಾಗುತ್ತಾ ಮಕ್ಕಳು ನಿಮ್ಮಿಂದ ಎಲ್ಲವನ್ನೂ ಮುಚ್ಚಿಡುತ್ತಾರೆ. ಉಲ್ಟಾ ಮಾತನಾಡುತ್ತಾರೆ, ನಿಮ್ಮಿಂದ ಎಮೋಷನಲಿ ದೂರ ಉಳಿಯುತ್ತಾರೆ. ನನ್ನ ಮಗಳ ಗುಣ ಏನು? ನನ್ನ ಮಗನ ಗುಣ ಏನು ಅನ್ನೋದು ನಿಮಗೆ ಗೊತ್ತಾಗೋದೇ ಇಲ್ಲ. ಚಿಕ್ಕವರಿದ್ದಾಗ ನೆಂಟರೆದುರು ನಿಮ್ಮ ತಾಯಿ ನಿಮ್ಮನ್ನು ಹೊಡೆದಾಗ ಹೇಗೆ ಅನಿಸಿತ್ತು? ನೆನಪು ಮಾಡಿಕೊಳ್ಳಿ.

ಮಕ್ಕಳಿಗೂ ನಮ್ಮಂತೆಯೇ ಡಿಗ್ನಿಟಿ ಇರುತ್ತದೆ. ಸ್ವಾಭಿಮಾನ ಇರುತ್ತದೆ. ನಮ್ಮನ್ನು ಯಾರಾದರೂ ಬೈದರೆ ಹಾಗೇ ಬಿಟ್ಟು ಬರುತ್ತೇವಾ? ಇಲ್ಲಿ ಪೋಷಕರಿಗೆ ಮಕ್ಕಳು ವಾಪಾಸ್‌ ಮಾತಾಡುವಂತೆಯೂ ಇಲ್ಲ. ಎಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಮನಸ್ಸನ್ನು ಡಸ್ಟ್‌ಬಿನ್‌ ಮಾಡಿಕೊಳ್ತಾರೆ. ಅವರ ಮೇಲೆ ಅವರಿಗೇ ನಂಬಿಕೆ ಕಡಿಮೆಯಾಗುತ್ತದೆ. ತಮ್ಮ ಮೇಲೆ ಅನುಮಾನ ಮೂಡುತ್ತದೆ.

ಏನು ಮಾಡಬಹುದು?

ಮಕ್ಕಳು ಪಬ್ಲಿಕ್‌ನಲ್ಲಿ ಮಿಸ್‌ ಬಿಹೇವ್‌ ಮಾಡಿದರೆ ಶಾಂತವಾದ ದನಿಯಲ್ಲಿ, ಆದರೆ ಸ್ಟ್ರಾಂಗ್‌ ಮೆಸೇಜ್‌ ನೀಡುವಂತೆ ತಮ್ಮ ಬಿಹೇವಿಯರ್‌ ಬದಲಾಯಿಸಿಕೊಳ್ಳುವಂತೆ ಹೇಳಿ. ಆದರೂ ಅದೇ ವರ್ತನೆ ಮರುಕಳಿಸಿದರೆ ಮಕ್ಕಳನ್ನು ಪ್ರೈವೇಟ್‌ ಆದ ಜಾಗಕ್ಕೆ ಕರೆದುಕೊಂಡು ಹೋಗಿ ಬುದ್ಧಿಹೇಳಿ.

ಮಕ್ಕಳನ್ನು ಎಲ್ಲರೆದುರು ಹೊಗಳುವುದು ಉತ್ತಮವಾ?

ಎಲ್ಲರೆದುರು ಹೊಗಳುವುದು ಹಾಗೂ ನಾಲ್ಕು ಗೋಡೆಯ ಮಧ್ಯೆ ತೆಗಳುವುದು ಬೆಸ್ಟ್‌ ಆಪ್ಷನ್‌. ಮಕ್ಕಳನ್ನು ಬೇರೆಯವರ ಎದುರು ಹೊಗಳಿದಾಗ ಅವರು ಅದು ತಮ್ಮ ಕ್ಯಾರೆಕ್ಟರ್‌ ಎಂದು ಸ್ಟ್ರಾಂಗ್‌ ಆಗಿ ನಂಬುತ್ತಾರೆ.ಇಂದು ನೀನು ಮನೆಗೆ ಬಂದ ಮಕ್ಕಳ ಜೊತೆ ತಾಳ್ಮೆಯಿಂದ ಆಟ ಆಡಿದ ರೀತಿ, ಅವರ ಜೊತೆ ನಿನ್ನ ಆಟಿಕೆಗಳನ್ನು ಹಂಚಿಕೊಂಡ ರೀತಿ ನನಗೆ ಇಷ್ಟವಾಯ್ತು ಎಂದು ಹೇಳಿದಾಗ ಮಕ್ಕಳಲ್ಲಿ ಕಾನ್ಫಿಡೆನ್ಸ್‌ ಬರುತ್ತದೆ. ಅದನ್ನು ಅವರ ಗುಣ ಎಂದು ನಂಬುತ್ತಾರೆ. ಎಮೋಷನಲ್‌ ಗುಣಗಳನ್ನು ಬೆಳೆಸಲು, ಕುಟುಂಬದ ಪ್ರೀತಿಯನ್ನು ಹೇಳಿಕೊಡಲು, ಆರೋಗ್ಯಕರ ಸಂಬಂಧಗಳನ್ನು ಗಟ್ಟಿಗೊಳಿಸುವ ರೀತಿಯ ಹೊಗಳಿಗೆ ಸೂಕ್ತವಾದ್ದು. ಅತಿಯಾಗಿ ಹೊಗಳುವುದು ತಪ್ಪಾಗುತ್ತದೆ. ಪಬ್ಲಿಕ್‌ನಲ್ಲಿ ನನ್ನ ಮಗಳು ಕ್ಲಾಸ್‌ಗೆ ಫಸ್ಟ್‌ ಎಂದು ಪದೇ ಪದೆ ಒತ್ತಿ ಹೇಳಿದಾಗ ಇದು ನಮ್ಮ ಪೋಷಕರಿಗೆ ಹೆಮ್ಮೆಯ ವಿಷಯ ಅವರು ನನ್ನನ್ನು ಪ್ರೀತಿಸಬೇಕು ಎಂದರೆ ನಾನು ಸದಾ ಫಸ್ಟ್‌ ಬರಬೇಕು ಎನ್ನುವ ಭಾರವನ್ನು ತಲೆಯ ಮೇಲೆ ಹಾಕಿಕೊಳ್ಳುತ್ತಾರೆ.

ಪ್ರತೀ ಮಕ್ಕಳು ವಿಭಿನ್ನ. ಮಕ್ಕಳನ್ನು ಬೆಳೆಸುವ ರೀತಿಯೂ ವಿಭಿನ್ನವಾಗಿರುತ್ತದೆ. ನಮ್ಮಲ್ಲಿರುವ ತಪ್ಪುಗಳನ್ನು ಒಪ್ಪಿಕೊಂಡು ಮುಂದಿನಪೀಳಿಗೆ ಅದ್ಭುತವಾಗಿರುವಂತೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಮಕ್ಕಳನ್ನು ಹೊಗಳುವ ಹಾಗೂ ತೆಗಳುವ ವೇಳೆ ಬ್ಯಾಲೆನ್ಸ್‌ ಇರಲಿ. ಮಕ್ಕಳು ತಪ್ಪು ಮಾಡಿದ ತಕ್ಷಣ ರಿಯಾಕ್ಟ್‌ ಮಾಡುವುದನ್ನು ನಿಲ್ಲಿಸಿಬಿಡಿ. ಕೆಲ ಸಮಯದ ನಂತರ ಆ ತಪ್ಪಿನ ಬಗ್ಗೆ ಮಾತನಾಡಿ. ನೀವು ಕೂಲ್‌ ಆಗಿದ್ದರೆ ಮಕ್ಕಳು ಕೂಡ ಕೂಲ್‌ ಆಗಿಯೇ ಇರುತ್ತಾರೆ. ನಿಮ್ಮ ಮಕ್ಕಳು ಮುಂದೆ ಯಾವ ರೀತಿ ವ್ಯಕ್ತಿಯಾಗಬೇಕು ಎಂದುಕೊಂಡಿದ್ದೀರೋ ಅದೇ ರೀತಿಯ ಫೌಂಡೇಷನ್‌ ಹಾಕುವುದು ನಿಮ್ಮ ಕರ್ತವ್ಯ.

Must Read