ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಗೆ ತುರ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 11 ಪುಟಗಳ ಪತ್ರ ಬರೆದಿದ್ದಾರೆ.
ರಾಜ್ಯದ ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಹಾಗೂ ಪರಿಹಾರ ಕಾರ್ಯಗಳಿಗೆ ಅಗತ್ಯ ನೆರವು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
3,705.30 ಕೋಟಿ ನೆರವು
ಕರ್ನಾಟಕದಲ್ಲಿ ಮಳೆ ಕೊರತೆ, ಬೆಳೆ ನಷ್ಟ ಮತ್ತು ಜಲಾಶಯಗಳಲ್ಲಿನ ನೀರಿನ ಪ್ರಮಾಣ ಕುಸಿತದಿಂದ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರವು ಬರ ಪರಿಹಾರಕ್ಕಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ನಿಯಮಗಳಡಿ ಒಟ್ಟು 3,705.30 ಕೋಟಿ ನೆರವು ಕೋರಿದ್ದು, ಅಂದಾಜು ಬೆಳೆ ಹಾಗೂ ಇತರ ನಷ್ಟ 18,748.23 ಕೋಟಿಯಷ್ಟಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಕೇಂದ್ರದ ತಂಡ ಬರಲಿ
ಬರ ಪರಿಸ್ಥಿತಿಯ ವಾಸ್ತವ ಚಿತ್ರಣವನ್ನು ಪರಿಶೀಲಿಸಲು ಕಲ್ಯಾಣ ಕರ್ನಾಟಕ ಭಾಗಕ್ಕೆ ತಕ್ಷಣ ಕೇಂದ್ರದ ತಂಡವನ್ನು ಕಳುಹಿಸಬೇಕು ಎಂಬುದು ಖರ್ಗೆ ಅವರ ಪ್ರಮುಖ ಬೇಡಿಕೆಯಾಗಿದೆ. ರಾಜ್ಯ ಕೇಳಿರುವ 3,705.30 ಕೋಟಿ ನೆರವನ್ನು ಯಾವುದೇ ಅನಗತ್ಯ ಕಡಿತವಿಲ್ಲದೆ ಬಿಡುಗಡೆ ಮಾಡುವಂತೆಯೂ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.
ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪರಿಹಾರ ದೊರೆಯುವಂತೆ, ಇನ್‌ಪುಟ್ ಸಬ್ಸಿಡಿ ಲೆಕ್ಕಾಚಾರಕ್ಕೆ ಹಳೆಯ ಕೃಷಿ ಗಣತಿ ಮಾಹಿತಿಯ ಬದಲಿಗೆ ಕರ್ನಾಟಕದ ನವೀಕರಿಸಿದ ‘ಭೂಮಿ’ ಭೂ ದಾಖಲೆಗಳನ್ನು ಪರಿಗಣಿಸಬೇಕು ಎಂದು ಅವರು ಸೂಚಿಸಿದ್ದಾರೆ. ಇದರಿಂದ ಅರ್ಹ ರೈತರು ಪರಿಹಾರದಿಂದ ಹೊರಗುಳಿಯದಂತೆ ನೋಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ವಿದ್ಯುತ್ ವೆಚ್ಚ, ನೀರಿನ ಲಭ್ಯತೆಗೂ ಪರಿಹಾರ ಬೇಕು
ಇದಲ್ಲದೆ, ಪರಿಶೀಲನೆಗೆ ಒಳಪಟ್ಟಿರುವ ಹೆಚ್ಚುವರಿ 11 ತಾಲೂಕುಗಳನ್ನೂ ಅರ್ಹವಾಗಿರುವ ಇತರ ಪ್ರದೇಶಗಳನ್ನೂ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿ ಕೇಂದ್ರದ ನೆರವಿನ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಕುಡಿಯುವ ನೀರಿನ ಲಭ್ಯತೆ ಹಾಗೂ ಪರ್ಯಾಯ ವಿದ್ಯುತ್ ವೆಚ್ಚಕ್ಕೂ ಹೆಚ್ಚಿನ ನೆರವು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕದ ಬರ ಪರಿಹಾರವನ್ನು ರಾಜಕೀಯ ಭೇದಗಳಿಗಿಂತ ಮಾನವೀಯ ಅಗತ್ಯವಾಗಿ ಪರಿಗಣಿಸಿ ತ್ವರಿತವಾಗಿ ನೆರವು ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.



